ಗಾಂಧೀಜಿ ಹೆಸರಿನ ಕ್ರೀಡಾಂಗಣ ಮರುನಾಮಕರಣಕ್ಕೆ ವಿರೋಧ: ತುಮಕೂರಿನಲ್ಲಿ ರಾಜಕೀಯ ಗದ್ದಲ
ತುಮಕೂರಿನ ಮಹಾತ್ಮಾ ಗಾಂಧಿ ಹೆಸರಿನ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ನೀಡಿರುವುದು ನಗರದಲ್ಲಿ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಕೈಗೊಂಡ ಈ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಕ್ರೀಡಾಂಗಣದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ತುಮಕೂರು (ಜ.12): ದಶಕಗಳ ಕಾಲ ಮಹಾತ್ಮಾ ಗಾಂಧೀಜಿ ಹೆಸರಿನಿಂದಲೇ ಗುರುತಿಸಿಕೊಂಡಿದ್ದ ತುಮಕೂರಿನ ಪ್ರತಿಷ್ಠಿತ ಒಳಾಂಗಣ ಕ್ರೀಡಾಂಗಣಕ್ಕೆ ಇದೀಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಅಳವಡಿಸಿರುವುದು ರಾಜಕೀಯ ತೀವ್ರತೆಗೆ ಕಾರಣವಾಗಿದೆ. ಈ ನಿರ್ಧಾರವನ್ನು ಖಂಡಿಸಿ ಬಿಜೆಪಿ ಮತ್ತು ಜಿಲ್ಲಾಡಳಿತದ ನಡುವೆ ಘರ್ಷಣೆ ಉಂಟಾಗಿದೆ.
ಜಿಲ್ಲೆಯ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸರ್ಕಲ್ ಸಮೀಪದಲ್ಲಿರುವ ಈ ಕ್ರೀಡಾಂಗಣದ ನಾಮಫಲಕವನ್ನು ಮಧ್ಯಾಹ್ನ ದಿಢೀರ್ ಬದಲಾಯಿಸಲಾಗಿದ್ದು, ‘ಮಹಾತ್ಮಾ ಗಾಂಧಿ’ ಎಂಬ ಹೆಸರಿನ ಬದಲು ‘ಡಾ. ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾ ಸಂಕೀರ್ಣ’ ಎಂಬ ಹೊಸ ಫಲಕ ಅಳವಡಿಸಲಾಗಿದೆ. ವಿಷಯ ತಿಳಿದ ತಕ್ಷಣ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ, ನೂಕಾಟ-ತಳ್ಳಾಟ
ಮರುನಾಮಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ ಬಿಜೆಪಿ ಕಾರ್ಯಕರ್ತರು ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಧರಣಿ ನಡೆಸಿದರು. ಹೊಸ ನಾಮಫಲಕವನ್ನು ತೆರವುಗೊಳಿಸುವಂತೆ ಒತ್ತಾಯಿಸಿದ ಕಾರ್ಯಕರ್ತರು, ಒಂದು ಹಂತದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಯತ್ನಿಸಿದರು. ಇದರಿಂದ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದಿದೆ.
ಬಿಗಿ ಪೊಲೀಸ್ ಬಂದೋಬಸ್ತ್, ಬಂಧನ ಪರಿಸ್ಥಿತಿ ಉದ್ರಿಕ್ತವಾಗುವುದನ್ನು ತಪ್ಪಿಸಲು ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಎರಡು ಕೆಎಸ್ಆರ್‌ಪಿ ತುಕಡಿಗಳನ್ನು ನಿಯೋಜಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಸ್ಥಳದಿಂದ ತೆರವುಗೊಳಿಸಲಾಯಿತು. ಸದ್ಯ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಗಾಂಧೀಜಿ ಹೆಸರನ್ನು ಸದಾ ಉಲ್ಲೇಖಿಸುವ ಕಾಂಗ್ರೆಸ್ ಪಕ್ಷವೇ ಇದೀಗ ಅವರ ಹೆಸರನ್ನು ಅಳಿಸಿ ತನ್ನ ನಾಯಕರ ಹೆಸರನ್ನು ಮುಂದಿಟ್ಟುಕೊಂಡಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಗೆ ಅಪಮಾನವಾಗಿದೆ ಎಂದು ಕಿಡಿಕಾರಿದ ಅವರು, ಜಿಲ್ಲಾಡಳಿತ ಸರ್ಕಾರದ ಒತ್ತಡಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಘೋಷಣೆ ಕೂಗಿದರು.


