ಮಾರೀಶಿಯಸ್ ಟ್ರಿಪ್ ಫೋಟೊಗಳಿಂದ ಹೆಚ್ಚಿದ ಕುತೂಹಲ: ಡಾಲಿ ಧನಂಜಯ್ ಮನೆಗೆ ಹೊಸ ಅತಿಥಿಯ ಆಗಮನವೇ?

Share It

ಜನಪ್ರಿಯ ನಟ ಡಾಲಿ ಧನಂಜಯ್ ಅವರ ಪತ್ನಿ ಧನ್ಯತಾ ಇತ್ತೀಚೆಗೆ ತಮ್ಮ ತಾಯಿ, ಅಕ್ಕ ಹಾಗೂ ಅಕ್ಕನ ಕುಟುಂಬದೊಂದಿಗೆ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ದೂರದ ಮಾರೀಶಿಯಸ್‌ಗೆ ಹೋಗಿ ಬಂದ ಅವರು, ಆ ಪ್ರವಾಸದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳನ್ನು ಗಮನಿಸಿದ ಅಭಿಮಾನಿಗಳು ಒಂದಿಷ್ಟು ವಿಶೇಷ ವಿಚಾರವನ್ನು ಗಮನಿಸಿ, ಕಂಗ್ರಾಟ್ಸ್ ಎಂದು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.

ಡಾಲಿ ಧನಂಜಯ್ ಮತ್ತು ಧನ್ಯತಾ ವಿವಾಹವಾಗಿ ವರ್ಷ ಪೂರೈಸುವ ಹಂತದಲ್ಲಿದ್ದಾರೆ. ಈ ಜೋಡಿ ಇದುವರೆಗೆ ಹಲವು ಪ್ರವಾಸಗಳ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಸದ್ಯ ಧನಂಜಯ್ ಸಿನಿಮಾಗಳ ಶೂಟಿಂಗ್‌ಗಳಲ್ಲಿ ನಿರತರಾಗಿದ್ದರೆ, ಧನ್ಯತಾ ತಮ್ಮ ಕುಟುಂಬದೊಂದಿಗೆ ವಿಶ್ರಾಂತಿಯ ಪ್ರವಾಸವನ್ನು ಆನಂದಿಸಿದ್ದಾರೆ.

ವೃತ್ತಿಯಿಂದ ವೈದ್ಯೆಯಾಗಿರುವ ಧನ್ಯತಾ, ಟ್ರಾವೆಲ್‌ ಪ್ರಿಯೆಯೂ ಹೌದು. ತಾಯಿ, ಅಕ್ಕ, ಅಕ್ಕನ ಪತಿ ಹಾಗೂ ಮಗನೊಂದಿಗೆ ಮಾರೀಶಿಯಸ್‌ಗೆ ತೆರಳಿದ ಅವರು, “Mauritius Diaries” ಎಂಬ ಕ್ಯಾಪ್ಶನ್‌ನೊಂದಿಗೆ ಪ್ರಕೃತಿ ಸೌಂದರ್ಯ, ಪ್ರವಾಸಿ ತಾಣಗಳು ಮತ್ತು ಕುಟುಂಬದ ನೆನಪುಗಳನ್ನು ಫೋಟೊ ಹಾಗೂ ವಿಡಿಯೋಗಳಾಗಿ ಹಂಚಿಕೊಂಡಿದ್ದಾರೆ.

ಆದರೆ ಈ ಫೋಟೊಗಳಲ್ಲಿ ಅಭಿಮಾನಿಗಳು ಬೇರೆ ಅರ್ಥವನ್ನೇ ಹುಡುಕಿದ್ದಾರೆ. ಕೆಲವು ಚಿತ್ರಗಳಲ್ಲಿ ಧನ್ಯತಾ ಅವರಲ್ಲಿ ಸಣ್ಣ ಬದಲಾವಣೆ ಕಾಣಿಸುತ್ತಿದೆ ಎಂದು ಹೇಳುತ್ತಾ, ಅವರು ಗರ್ಭಿಣಿಯಾಗಿರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಮೆಂಟ್ ವಿಭಾಗದಲ್ಲಿ ‘Congrats’, ‘Good News’ ಎಂಬ ಶುಭಾಶಯಗಳು ಕಾಣಿಸಿಕೊಂಡಿವೆ.

ಕಳೆದ ವರ್ಷ ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಲಿ ಧನಂಜಯ್ ಮತ್ತು ವೈದ್ಯೆ ಡಾ. ಧನ್ಯತಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಅನೇಕ ಗಣ್ಯರು ಮತ್ತು ಅಭಿಮಾನಿಗಳು ಈ ಮದುವೆಗೆ ಸಾಕ್ಷಿಯಾಗಿದ್ದರು. ಮದುವೆಯಾಗಿ ವರ್ಷ ಮುಗಿಯುವ ಮೊದಲೇ ಶುಭ ಸುದ್ದಿ ಸಿಗಬಹುದೇ ಎಂಬ ನಿರೀಕ್ಷೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.

ಆದರೆ ಧನ್ಯತಾ ಗರ್ಭಿಣಿಯಾಗಿರುವ ಕುರಿತು ಇದುವರೆಗೆ ಡಾಲಿ ಧನಂಜಯ್ ಅಥವಾ ಕುಟುಂಬದವರಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಹೀಗಾಗಿ ಈ ಸುದ್ದಿ ಕೇವಲ ಊಹೆ ಮಾತ್ರವೇ ಆಗಿದೆ. ಆದರೂ ಫೋಟೊಗಳನ್ನು ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ತಮ್ಮ ಮೆಚ್ಚಿನ ನಟನ ಕುಟುಂಬಕ್ಕೆ ಶುಭಕೋರುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಧನಂಜಯ್ ಸದ್ಯ ಹಲವು ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಉತ್ತರಕಾಂಡ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ‘ಹಲಗಲಿ’, ‘666 ಆಪರೇಷನ್ ಡ್ರೀಮ್ ಥಿಯೇಟರ್’, ‘ಜಿಂಗೋ’ ಸೇರಿದಂತೆ ಇನ್ನಿತರ ಸಿನಿಮಾಗಳು ಕೂಡ ಸಾಲಿನಲ್ಲಿ ಇದ್ದಾವೆ. ಈ ಚಿತ್ರಗಳು ಯಾವಾಗ ಬಿಡುಗಡೆಯಾಗುತ್ತವೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Share It

You May Have Missed

You cannot copy content of this page