ಹೊಸಕೋಟೆ: ಪತಿಯನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪ್ರಕರಣ ಭೇದಿಸಿರುವ ಸೂಲಿಬೆಲೆ ಪೊಲೀಸರು ಮೃತ ವ್ಯಕ್ತಿಯ ಪತ್ನಿ, ಆಕೆಯ ಪ್ರಿಯಕರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಮೃತನ ಪತ್ನಿ ಪುಷ್ಪ, ಪ್ರಿಯಕರ ದೇವರಾಜ್, ಮುನೀಂದ್ರ, ಶಿವಾನಂದ ಅಲಿಯಾಸ್ ಸಿದ್ದಪ್ಪ ಬಂಧಿತರು.
ಜ.22ರಂದು ತಮರಸ-ನಹಳ್ಳಿ ಬಳಿ ದ್ವಿಚಕ್ರ ವಾಹನ ಅಪಘಾತದಲ್ಲಿ ಪುಷ್ಪ ಅವರ ಪತಿ ಅಶೋಕ್ ಮೃತಪಟ್ಟಿದ್ದರು ಎಂದು ಬಿಂಬಿಸಲಾಗಿತ್ತು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಶಿವಾನಂದ ಅಲಿಯಾಸ್ ಸಿದ್ದಪ್ಪ ಅವರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಜ.22ರ ಮದ್ಯರಾತ್ರಿ ದೇವರಾಜ್, ಮುನೀಂದ್ರ, ಶಿವಾನಂದ ಸೇರಿ ಅಶೋಕ್ ಅವರನ್ನು ಸಿದ್ದೇನಹಳ್ಳಿ ಗ್ರಾಮದ ಕೆರೆಯಲ್ಲಿ ಮದ್ಯದ ಪಾರ್ಟಿಗೆ ಕರೆದೊಯ್ದಿದ್ದರು. ಮದ್ಯ ಸೇವಿಸಿದ ನಂತರ ಆತನನ್ನು ಹತ್ಯೆ ಮಾಡಿ ತಮರಸನಹಳ್ಳಿಗೆ ಹಳ್ಳಿಗೆ ಹೋಗುವ ಮಾರ್ಗದ ತಿರುವಿನಲ್ಲಿ ವಿದ್ಯುತ್ ಕಂಬದ ಬಳಿ ಅಪಘಾತ ರೀತಿಯಲ್ಲಿ ಶವವಿಟ್ಟು ಪರಾರಿ.ಯಾಗಿದ್ದರು. ಅಪಘಾತ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಇದೊಂದು ಹತ್ಯೆ ಇರಬಹುದೆಂದು ತನಿಖೆ ಆರಂಭಿಸಿದ್ದರು.
ಶವ ಪತ್ತೆಯಾದ ದಿನವೇ ಗ್ರಾಮಸ್ಥರು ಇದು ಅಪಘಾತವಲ್ಲ, ಹತ್ಯೆ ಎಂದು ಆರೋಪ ಮಾಡಿದ್ದರು.ಗ್ರಾಮಸ್ಥರು ಮಾಡಿದಆರೋಪಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ದೇವರಾಜ್, ಮುನೀಂದ್ರ, ಶಿವಾನಂದ ಈ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತ್ನಿಯ ಕೈವಾಡ ಗೊತ್ತಾಗಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತನ್ನ ಪತಿ ಅಶೋಕ್ ಅವರನ್ನು ಕೊಲೆ ಮಾಡಲು ಪತ್ನಿ ಪುಷ್ಪ ತನ್ನ ಪ್ರಿಯಕರ ದೇವರಾಜ್, ₹2 ಲಕ್ಷಕ್ಕೆ ಮುನೀಂದ್ರ ಹಾಗೂ ಶಿವಾನಂದಗೆ ಸುಪಾರಿ ನೀಡಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಪತಿ ಶವ ಪತ್ತೆಯಾದ ದಿನ ಪುಷ್ಪ ಕಣ್ಣೀರು ಹಾಕಿದ್ದ ರೀತಿ, ಆಕೆಯ ಹಾವಭಾವ ಹಲವು ಅನುಮಾನ ಮೂಡಿಸಿತ್ತು.ಇದನ್ನು ಗ್ರಾಮಸ್ಥರು ಗುರುತಿಸಿದ್ದರು
ಕಂಠಪೂರ್ತಿ ಕುಡಿಸಿ, ರಾಡ್‌ನಿಂದಹೊಡೆದರು:
ಪೈಂಟ್ ಕೆಲಸ ಒಪ್ಪಂದ ಕೊಡಿಸುವುದಾಗಿ ಮೃತ ಅಶೋಕನನ್ನ ಕರೆದಿದ್ದ ದೇವರಾಜ್ ಕಂಠಪೂರ್ತಿ ಕುಡಿಸಿದ್ದ. ನಶೆ ಏರುತ್ತಿದ್ದಂತೆ-ಯೇ ಮೂವರು ರಾಡ್‌ನಿಂದ ಆತನ ತಲೆಗೆ ಹೊಡೆದು,ಉಸಿರಾಡದಂತೆ ಬಾಯಿ, ಮೂಗು ಮುಚ್ಚಿದ್ದರು. ಶವವನ್ನು ಅವರದ್ದೆ ಬೈಕ್‌ನಲ್ಲಿ ಸಾಗಿಸಿ ಅಪಘಾತದಂತೆ ಬಿಂಬಿಸಿದ್ದರು. ಅಶೋಕನ ಮೊಬೈಲ್ ಅನ್ನು ಆತನ ಪತ್ನಿಗೆ ಕೊಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜ.22ರ ರಾತ್ರಿ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಗುದ್ದಿ ರಸ್ತೆ ಬದಿ ಬಿದ್ದಿದ್ದ ರೀತಿಯಲ್ಲಿ ಅಶೋಕ್ ಶವ ಪತ್ತೆಯಾಗಿತ್ತು. ಪ್ರಾಥಮಿಕವಾಗಿ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಪತ್ನಿ ಪುಷ್ಪ ಸಹ ತನ್ನ ಪತಿ ಮದ್ಯಪಾನ ಮಾಡಿದ್ದ ಎಂದು ಹೇಳಿಕೆ ಕೊಟ್ಟಿದ್ದರು.
ಮರುದಿನ ಸ್ಥಳ ಮಹಜರು ನಡೆಸಿದಾಗ ಬೈಕ್ ಮೇಲೆ ಬಿದ್ದಾಗ ಆಗುವ ಗಾಯ ಮತ್ತು ವಾಹನದ ಮೆಲೀನ ಗುರುತುಗಳಿಗೂ ಅಪಘಾತಕ್ಕೂ ಒಂದಕ್ಕೊಂದು ಹೋಲಿಕೆ ಆಗಲಿಲ್ಲ. ಹೀಗಾಗಿ ಇಂದೊಂದು ಹತ್ಯೆ ಇರಬಹುದು ಎಂಬ ಅನುಮಾನ ಬಂದಿತ್ತು ಎಂದು ಎಎಸ್ಪಿ ವೆಂಕಟೇಶ್ ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಸಾಮಾನ್ಯವಾಗಿ ಬೈಕ್ ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿದಾಗ ಆಗುವ ಗಾಯದ ಗುರುತುಗಳಿಗೂ ಬೇರೆ ವಸ್ತುವಿನಿಂದ ಹೊಡೆದಾಗ ಆಗುವ ಗುರುತುಗಳಿಗೂ ವ್ಯತ್ಯಾಸ ಇರುತ್ತದೆ. ಬೈಕ್ ಮುಂಭಾಗದ ಹೆಡ್‌ಲೈಟ್ ಡೂಮ್ ನಲ್ಲಿ ಚಾಕುವಿನ ಗುರುತುಗಳು ಪತ್ತೆಯಾಗಿದ್ದವು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ಅರಂಭಿಸಿದಾಗ ಅಕ್ರಮ ಸಂಬಂಧದ ಸುಳಿವು ಸಿಕ್ಕಿತ್ತು ಎಂದರು.
ಮೃತನ ಪತ್ನಿಯ ಪ್ರಿಯಕರನಾದ ಸಿದ್ದೇನಹಳ್ಳಿಯ ದೇವರಾಜ್ ದೊಡ್ಡಹುಲ್ಲೂರು ಗ್ರಾಮಕ್ಕೆ ಸೇರಿದ ಮುನೀಂದ್ರ, ದೊಡ್ಡ ಹುಲ್ಲೂರಿನಲ್ಲಿ ವಾಸವಿದ್ದ ಕಲಬುರಗಿಯ ಶಿವಾನಂದ ಅಲಿಯಾಸ್ ಸಿದ್ದಪ್ಪ ಅವರಿಗೆ ಅಶೋಕ್ ಕೊಲೆಗಾಗಿ ₹2 ಲಕ್ಷ ಸುಪಾರಿ ನೀಡಿದ್ದರು. ಆದರೆ ಹಣ ಪಾವತಿಸಿರಲಿಲ್ಲ ಎಂದು ತಿಳಿಸಿದ್ದಾರೆ.

