ಉನ್ನತ ಶಿಕ್ಷಣ ವ್ಯವಸ್ಥೆ ಮರುವ್ಯಾಖ್ಯಾನ ಅವಶ್ಯ: ಪ್ರೊ.ಟಿ.ಡಿ. ಕೆಂಪರಾಜು
ಕೌಶಲ್ಯ,ಗುಣಮಟ್ಟ ಶಿಕ್ಷಣ ವ್ಯವಸ್ಥೆಯಿಂದ ವಿಕಸಿತ ಭಾರತ ನಿರ್ಮಾಣ : ಡಾ. ಜಯಕರ ಎಸ್.ಎಂ
“ತಂತ್ರಜ್ಞಾನ ಮತ್ತು ಎಐ ಪರಿಕರಗಳು ಶಿಕ್ಷಣ ಕ್ಷೇತ್ರವನ್ನು ವ್ಯಾಪಿಸಿದ್ದು ಉನ್ನತ ಶಿಕ್ಷಣ ವ್ಯವಸ್ಥೆಗೆ ಮರುವ್ಯಾಖ್ಯಾನ ನೀಡುವುದು ಅವಶ್ಯಕವಾಗಿದೆ. ತಂತ್ರಜ್ಞಾನ, ಗುಣಮಟ್ಟ, ಕೌಶಲ್ಯಧಾರಿತ ಶಿಕ್ಷಣ ವ್ಯವಸ್ಥೆಯ ಮೂಲಕ ಸ್ಪರ್ಧಾತ್ಮಕ ಸಮಾಜವನ್ನು ನಿರ್ಮಿಸಬಹುದು” ಎಂದು ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯ ಪ್ರೊ.ಟಿ.ಡಿ. ಕೆಂಪರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಅಧ್ಯಾಪಕರ ಕೌಶಲ್ಯಾಭಿವೃದ್ದಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ಶಿಕ್ಷಣ ಕ್ಷೇತ್ರ ದೇಶದ ಅಭಿವೃದ್ಧಿಯ ಬೆನ್ನೆಲುಬು. ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಆಡಳಿತ ಸೇರಿದಂತೆ ಸಮಾಜದ ಪ್ರತಿ ಕ್ಷೇತ್ರವೂ ಶಿಕ್ಷಣ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಚಾಕ್‌ಬೋರ್ಡ್‌ನಿಂದ ಆರಂಭವಾದ ಶಿಕ್ಷಣ ವ್ಯವಸ್ಥೆ ಇಂದು ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ಸ್‌ವರೆಗೂ ಬಂದು ನಿಂತಿದೆ. ವಿಶ್ವವೇ ತಂತ್ರಜ್ಞಾನ ಆಧಾರಿತವಾಗಿದ್ದು ಶಿಕ್ಷಣದಲ್ಲಿ ಕೌಶಲ್ಯ ಮತ್ತು ಗುಣಮಟ್ಟ ಸಾಧಿಸುವುದು ಅತ್ಯವಶ್ಯಕವಾಗಿದೆ. ಮಾನವ ಸಂಪನ್ಮೂಲ ಮತ್ತು ಯುವ ಸಮೂಹ ಭಾರತದ ಶಕ್ತಿಯಾಗಿದ್ದು ಗುಣಮಟ್ಟದ ಶಿಕ್ಷಣದಿಂದ ಸದೃಡ ರಾಷ್ಟ್ರನಿರ್ಮಾಣ ಸಾಧ್ಯ ಎಂದು ತಿಳಿಸಿದರು.
“ಸಮಾಜದ ಬೆಳವಣಿಗೆ, ಉದ್ಯಮ ಕ್ಷೇತ್ರದ ಅವಶ್ಯಕತೆ ಹಾಗೂ ಶಿಕ್ಷಣ ಕ್ಷೇತ್ರಗಳ ಪೂರೈಕೆಯಲ್ಲಿ ಭಾರೀ ಅಂತರವಿದೆ. ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಸೃಜನಶೀಲ ಮತ್ತು ನಾವೀನ್ಯತೆ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಜ್ಞಾನ ಮತ್ತು ಕೌಶಲ್ಯಧಾರಿತ ಪಠ್ಯಕ್ರಮ, ಮೌಲ್ಯಮಾಪನ ವಿಧಾನ, ಆಡಳಿತ ವ್ಯವಸ್ಥೆ, ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಮತ್ತು ನವೀನ ಭೋದನಾ ವಿಧಾನಗಳನ್ನು ಅಳವಡಿಸಿಕೊಂಡು ಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿದರೆ ಶಿಕ್ಷಣದ ಗುಣಮಟ್ಟ ವೃದ್ದಿಸುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಎಸ್.ಎಂ ಮಾತನಾಡಿ” ನಾವು ತಂತ್ರಜ್ಞಾನ ಮತ್ತು ಎಐ ಯುಗದಲ್ಲಿ ಬದುಕುತ್ತಿದ್ದೇವೆ. ತಂತ್ರಜ್ಞಾನವು ಶಿಕ್ಷಣ ಕ್ಷೇತ್ರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದೆ. ಆ ಬದಲಾವಣೆಯನ್ನು ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಳ್ಳಬೇಕು. ಕೇವಲ ಪದವಿ ನೀಡುವುದಲ್ಲದೇ ಭವಿಷ್ಯದ ದೃಷ್ಟಿಯಿಂದ ಯುವ ವರ್ಗವನ್ನು ರೂಪಿಸಿ, ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ದಿಸಿ, ಮಾರ್ಗದರ್ಶನ ಮಾಡಿ ಸಮರ್ಥ ನಾಗರಿಕರನ್ನಾಗಿಸುವುದು ಶಿಕ್ಷಣ ಕ್ಷೇತ್ರದ ಜವಾಬ್ದಾರಿಯಾಗಿದೆ. ಶಿಕ್ಷಕರು ಪ್ರಸ್ತುತ ಮತ್ತು ಭವಿಷ್ಯದ ಅಗತ್ಯತೆಗಳ ಅನುಸಾರ ತಂತ್ರಜ್ಞಾನ, ಸಂಶೋಧನೆ ಮತ್ತು ಭೋದನಾ ವಿಧಾನಗಳಲ್ಲಿ ಸಜ್ಜಾಗಿರಬೇಕು. ಗುಣಮಟ್ಟದ ಶಿಕ್ಷಣ, ಜವಾಬ್ದಾರಿಯುತ ಹಾಗೂ ತಂತ್ರಜ್ಞಾನ ಸಜ್ಜಿತ ಉನ್ನತ ಶಿಕ್ಷಣ ವ್ಯವಸ್ಥೆಯಿಂದ ವಿಕಸಿತ ಭಾರತ ನಿರ್ಮಿಸಬಹುದು” ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಸಚಿವರಾದ ಕೆ.ಟಿ ಶಾಂತಲಾ., ಪಿಎಂ ಉಷಾ ನೋಡಲ್ ಅಧಿಕಾರಿ ಪ್ರೊ.ವಿ. ಸುದೇಶ್., ಐಕ್ಯೂಎಸಿ ನಿರ್ದೇಶಕ ಪ್ರೊ.ಬಿ.ಸಿ.ನಾಗರಾಜ, ಪಿಎಂ- ಉಷಾ ಸಂಯೋಜಕರಾದ ಪ್ರೊ. ವಾಹಿನಿ., ಸಿಪಿಆರ್‌ಎಚ್‌ಇ, ಎನ್‌ಐಇಪಿಎ ನಿರ್ದೇಶಕ ಪ್ರೊ. ಪ್ರದೀಪ್ ಕುಮಾರ್ ಮಿಶ್ರಾ ಮತ್ತು ಐಸಿಟಿ ಆ್ಯಂಡ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕೋಶದ ಮುಖ್ಯಸ್ಥ ಪ್ರೊ.ಕೆ. ಶ್ರಿನಿವಾಸ್ ಭಾಗವಹಿಸಿದ್ದರು. ರಾಜ್ಯದ ವಿವಿಧ ಕಾಲೇಜುಗಳ ಸುಮಾರು ಐನೂರು ಅಧ್ಯಾಪಕರು ಕಾರ್ಯಕ್ರಮದ ಪ್ರಯೋಜನ ಪಡೆದರು.

