ಸುದ್ದಿ

Indian Railways ನೇಮಕಾತಿಯಲ್ಲಿ ಯೋಧರಿಗೆ ಆದ್ಯತೆ: ಅಗ್ನಿವೀರರು, ಮಾಜಿ ಸೈನಿಕರಿಗೆ ವಿಶೇಷ ಮೀಸಲಾತಿ

Share It

ದೇಶ ಸೇವೆ ಸಲ್ಲಿಸಿದ ಯೋಧರಿಗೆ ನಾಗರಿಕ ಉದ್ಯೋಗದಲ್ಲಿ ಭದ್ರ ಭವಿಷ್ಯ ಕಲ್ಪಿಸುವ ಉದ್ದೇಶದಿಂದ Indian Railways ಮಹತ್ವದ ನಿರ್ಧಾರ ಕೈಗೊಂಡಿದೆ. ಅಗ್ನಿವೀರರು ಮತ್ತು ಭಾರತೀಯ ಸೇನೆಯಲ್ಲಿ ಸೇವೆ ಪೂರ್ಣಗೊಳಿಸಿದ ಮಾಜಿ ಸೈನಿಕರಿಗೆ ರೈಲ್ವೆ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ನೀಡಲು ರೈಲ್ವೆ ಮತ್ತು Indian Army ನಡುವಿನ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಈ ಒಪ್ಪಂದದಡಿ, ಹಂತ-1 (ಲೆವೆಲ್-1) ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇಕಡಾ 20 ಹಾಗೂ ಅಗ್ನಿವೀರರಿಗೆ ಶೇಕಡಾ 10 ಮೀಸಲಾತಿ ನೀಡಲಾಗುತ್ತದೆ. ಹಂತ-2 ಮತ್ತು ಅದಕ್ಕಿಂತ ಮೇಲಿನ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇಕಡಾ 10 ಮತ್ತು ಅಗ್ನಿವೀರರಿಗೆ ಶೇಕಡಾ 5 ಮೀಸಲಾತಿ ನಿಗದಿಯಾಗಿದೆ. ದೇಶ ರಕ್ಷಣೆಯಲ್ಲಿ ತಮ್ಮ ಯೌವನವನ್ನು ಅರ್ಪಿಸಿದವರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ನೀಡುವ ಮಹತ್ವದ ಹೆಜ್ಜೆಯಾಗಿ ಇದನ್ನು ಪರಿಗಣಿಸಲಾಗಿದೆ.

ಇದೇ ಸಂದರ್ಭದಲ್ಲಿ, ರೈಲ್ವೆ ಇಲಾಖೆಯು ಶೀಘ್ರದಲ್ಲೇ 5,000ಕ್ಕೂ ಹೆಚ್ಚು ಪಾಯಿಂಟ್ಸ್‌ಮನ್ ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ರೂಪಿಸಿದೆ. ಈ ಹುದ್ದೆಗಳನ್ನು ಮುಖ್ಯವಾಗಿ ನಿವೃತ್ತ ಅಗ್ನಿವೀರರು ಮತ್ತು ಮಾಜಿ ಸೈನಿಕರಿಂದಲೇ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಒಪ್ಪಂದದ ಅನುಷ್ಠಾನಕ್ಕಾಗಿ ರೈಲ್ವೆಯ ಒಂಬತ್ತು ವಲಯಗಳು ಸೇನೆಯೊಂದಿಗೆ ಸಮನ್ವಯ ಸಾಧಿಸಿರುವುದಾಗಿ ತಿಳಿಸಲಾಗಿದೆ.

2022ರಲ್ಲಿ ಆರಂಭವಾದ Agnipath Scheme ಯೋಜನೆಯಡಿ ನೇಮಕವಾದ ಅಗ್ನಿವೀರರು ನಾಲ್ಕು ವರ್ಷಗಳ ಸೇವೆಯ ಬಳಿಕ ನಿವೃತ್ತರಾಗುತ್ತಾರೆ. ಮೊದಲ ಬ್ಯಾಚ್ 2026ರ ಅಂತ್ಯದ ವೇಳೆಗೆ ಸೇವೆಯಿಂದ ಹೊರಬರಲಿದ್ದು, ಅವರಿಗೆ ನಾಗರಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಈ ಹೊಸ ಕ್ರಮ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ.


Share It

You cannot copy content of this page