ಉಳ್ಳಾಲ (ದಕ್ಷಿಣ ಕನ್ನಡ): ಓಮನ್ ದೇಶದಲ್ಲಿ ಉದ್ಯೋಗದಲ್ಲಿದ್ದ ಸೋಮೇಶ್ವರದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿ ಪುತ್ರ ಪುನೀತ್ ಪೂಜಾರಿ (32) ಮೃತ ಯುವಕ. ಈತ ಕಳೆದ ಒಂದೂವರೆ ವರ್ಷಗಳಿಂದ ಓಮನ್ ದೇಶದಲ್ಲಿ ಲಿಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು ವಾಪಸ್ ಕೆಲಸಕ್ಕೆ ಹಿಂತಿರುಗಿದ್ದರು.
ಇಸ್ರೇಲ್ ಅಮೆರಿಕ ಮತ್ತು ಇರಾನ್ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಓಮನ್ ದೇಶದ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ ಬೇಕಾಗುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ತಂದೆ – ತಾಯಿ, ಸಹೋದರ ಹಾಗೂ ಸಹೋದರಿಯನ್ನು ಯುವಕ ಪುನೀತ್ ಅಗಲಿದ್ದಾರೆ. ಮಾಹಿತಿ ಪ್ರಕಾರ, ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದು, ಇತ್ತೀಚೆಗೆ ಯುವತಿ ಫೋನ್ ಕರೆ ಸ್ವೀಕರಿಸದೇ, ಸಂದೇಶಗಳಿಗೆ ಪ್ರತಿಕ್ರಿಯೆ ನೀಡದ ಹಿನ್ನೆಲೆ ಪುನೀತ್ ಮನನೊಂದಿದ್ದರು ಎನ್ನಲಾಗಿದೆ.
ಈ ವಿಷಯವನ್ನು ತಮ್ಮ ಗೆಳೆಯರ ಬಳಿ ಪುನೀತ್ ಹಂಚಿಕೊಂಡಿದ್ದರು. ಪ್ರೀತಿ ದೂರವಾದ ನೋವಿನಲ್ಲಿ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

