ಬೆಂಗಳೂರು: ಅಗ್ರಿ-ಟೆಕ್ ಕ್ಷೇತ್ರದಲ್ಲಿ ಯುವಜನತೆ ಮತ್ತು ಐಟಿ ಉದ್ಯೋಗಿಗಳು ಕೃಷಿ ಉದ್ಯಮಿಗಳಾಗುತ್ತಿರುವುದು ಸಂತಸದ ವಿಷಯ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಅಭಿಪ್ರಾಯಪಟ್ಟರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ರವರು ಇದೇ ಮೊಟ್ಟ ಮೊದಲ ಬಾರಿಗೆ ಜಾಗತಿಕ ಅಗ್ರಿಟೆಕ್ ಶೃಂಗಸಭೆಯ (Global Agri-Tech Summit) ಅನಾವರಣ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಆಧುನಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಬ್ರಾಂಡಿಂಗ್ ಬಳಕೆಯಿಂದ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದು ತಿಳಿಸಿದರು.
ಹೊಸ ತಂತ್ರಜ್ಞಾನಗಳು, ಸಂಸ್ಕರಣೆ ಮತ್ತು ಮಾರ್ಕೆಟಿಂಗ್ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುವುದು ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಅವರು ಒತ್ತಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಐಟಿ ಮತ್ತು ಬಿಟಿ ಕ್ಷೇತ್ರದ ಯುವಕರು ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದನ್ನು ಶ್ಲಾಘಿಸಿದ ಸಚಿವರು, ಇವರ ಪಾಲ್ಗೊಳ್ಳುವಿಕೆಯಿಂದ ಈ ಕ್ಷೇತ್ರಕ್ಕೆ ಹೊಸ ಆಯಾಮ ಸಿಗಲಿದೆ. ಯಾವುದೇ ಒಂದು ಸಂಸ್ಥೆಯ ಯಶಸ್ಸಿನಲ್ಲಿ ಮಾರುಕಟ್ಟೆ (Marketing) ಪಾತ್ರ ಬಹಳ ದೊಡ್ಡದು ಎಂದು ಅವರು ಅಭಿಪ್ರಾಯಪಟ್ಟರು.
ಮೊಟ್ಟ ಮೊದಲ ಬಾರಿಗೆ ಎಫ್‌ಕೆಸಿಸಿಐ ರವರು ಆಯೋಜಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಚಿವರು ಎಫ್‌ಕೆಸಿಸಿಐ ಜತೆ ಕೃಷಿ ಇಲಾಖೆ ಮಾತ್ರವಲ್ಲ ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಈ ಮೂರು ಇಲಾಖೆಯವರು ಒಟ್ಟಿಗೆ ಸೇರಿ ಕಾರ್ಯಕ್ರಮ ಮಾಡುತ್ತೇವೆಂದು ಭರವಸೆ ನೀಡಿದರು ಮತ್ತು ಯಾವುದೇ ಆತಂಕವಿಲ್ಲದೆ ಮುಂದುವರಿಯುವಂತೆ ಧೈರ್ಯ ತುಂಬಿದರು.
ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷರಾದ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ ಸಾಯಿರಾಂ ಪ್ರಸಾದ್, ಉಪಾಧ್ಯಕ್ಷರಾದ ಬಿ ಪಿ ಶಶಿಧರ್, ನಿಕಟಪೂರ್ವ ಅಧ್ಯಕ್ಷರಾದ ಎಂ ಜಿ ಬಾಲಕೃಷ್ಣ ಹಾಗೂ ಅಗ್ರಿಟೆಕ್ ಸಮಿತಿ ಛೇರ್ಮನ್ ರೂಪಾ ರಾಣಿ, ಎಫ್‌ಕೆಸಿಸಿಐ ಅಧ್ಯಕ್ಷರು, ಸಮಿತಿ ಸದಸ್ಯರು ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

