ಎಚ್.ಸಿ. ಮಹದೇವಪ್ಪ ನಿವಾಸದಲ್ಲಿ ದಲಿತ ನಾಯಕರ ಸಭೆ: ಗ್ಯಾರಂಟಿಗೆ SCTP ಹಣ ಬಳಕೆ ಕುರಿತು ಚರ್ಚೆ
ಬೆಂಗಳೂರು: ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ನಿವಾಸದಲ್ಲಿ ದಲಿತ ಶಾಸಕರ ಸಭೆ ನಡೆದಿದ್ದು, ರಾಜಕೀಯ ಕುತೂಹಲ ಮೂಡಿಸಿದೆ.
ದಲಿತ ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳ ಬೆನ್ನಲ್ಲೇ ಆಗಾಗ ದಲಿತ ನಾಯಕರ ಸಭೆ ನಡೆಯುತ್ತಿದೆ. ಈ ಹಿಂದೆ ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಸಭೆಯ ನಡೆದಿದ್ದವು. ಇದೀಗ ಸಮಾಜ ಕಲ್ಯಾಣ ಸಚಿವರ ನಿವಾಸದಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ದಲಿತ ಸಮುದಾಯಗಳಿಗೆ ಮೀಸಲಿಟ್ಟ SCTP ಅನುದಾನ ಬಳಕೆ ಮಾಡಿಕೊಂಡಿರುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಅನುದಾನವನ್ನು ಬೇರೆ ಕಡೆಗೆ ಬಳಕೆ ಮಾಡಿಕೊಂಡಿರುವುದನ್ನು ರಾಜಕೀಯವಾಗಿ ಸಮರ್ಥನೆ ಮಾಡಿಕೊಳ್ಳುವುದು ಕಷ್ಟ ಎಂದು ಶಾಸಕರ ಮಹದೇವಪ್ಪ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಈಗಾಗಲೇ ದಲಿತರ ಹಣ ದುರುಪಯೋಗದ ಬಗ್ಗೆ ಮಾತನಾಡುತ್ತಿದೆ. ಇದರಿಂದ ಪಕ್ಷಕ್ಕೆ ರಾಜಕೀಯ ಹಿನ್ನಡೆಯಾಗುತ್ತಿದೆ. ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಈ ಕುರಿತು ಸಿಎಂ ಜತೆಗೆ ಚರ್ಚೆ ನಡೆಸಿ, SCTp ಅನುದಾನವನ್ನು ಸಮುದಾಯಗಳ ಅಭಿವೃದ್ಧಿಗೆ ಮಾತ್ರವೇ ಬಳಸುವಂತೆ ತೀರ್ಮಾನಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ದಲಿತ ಸಮುದಾಯದ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ದರು.


