ಬೆಂಗಳೂರು: ಇದೇ ಮಾರ್ಚ್ ನಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಇದರಿಂದ ಗ್ರಾಹಕರಿಗೆ ಅನಾನುಕೂಲವಾಗುವ ಸಾಧ್ಯತೆಗಳಿವೆ.
ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ಕರೆದಿರುವ ಮುಷ್ಕರ ದೇಶಾದ್ಯಂತ ಇದೆ ಮಾರ್ಚ್ 24, 25 ರಂದು ನಡೆಯಲಿದೆ. ಮುಷ್ಕರದಿಂದಾಗಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಸಿಗಲಿದೆ. ಇದು ಗ್ರಾಹಕರಿಗೆ ಅನಾನುಕೂಲವಾಗಲಿದೆ. ಗ್ರಾಹಕರು ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗೆ ಪರದಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ.
ಮಾ.22 ರಂದು ನಾಲ್ಕನೇ ಶನಿವಾರದ ಕಾರಣ ರಜೆಯಿದ್ದರೆ, ಭಾನುವಾರ ಎಂದಿನಂತೆ ರಜೆ ಇರಲಿದೆ. 24 ರ ಸೋಮವಾರ ಹಾಗೂ 25 ರ ಮಂಗಳವಾರ ಮುಷ್ಕರದ ಕಾರಣಕ್ಕೆ ಬ್ಯಾಂಕ್ ಗಳು ಬಾಗಿಲು ಮುಚ್ಚಲಿವೆ. ಇದರಿಂದಾಗಿ ಬ್ಯಾಂಕಿಂಗ್ ವ್ಯವಹಾರ ಸ್ಥಗಿತಗೊಳ್ಳಲಿದೆ.
ವಾರದಲ್ಲಿ ಐದು ದಿನದ ಕೆಲಸ, ಎಲ್ಲ ಗುತ್ತಿಗೆ ನೌಕರರ ಖಾಯಂಗೊಳಿಸುವುದು, ಗ್ರಾಹಕರಿಂದ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲಾಗುವ ದೌರ್ಜನ್ಯ ತಡೆ, ಗ್ರ್ಯಾಚ್ಯುಟಿ ಮೊತ್ತವನ್ನು 25 ಲಕ್ಷ ರು.ಗಳಿಗೆ ಹೆಚ್ಚಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಬ್ಯಾಂಕ್ ನೌಕರರ ಒಕ್ಕೂಟ ಮುಂದಿಟ್ಟಿದೆ. ಹೀಗಾಗಿ, ಎರಡು ದಿನಗಳ ಮುಷ್ಕರ ನಡೆಸಲಾಗುತ್ತಿದೆ.