ಮಂಗಳೂರು ಕೊಲೆ ಕೇಸ್: ಪಾಕಿಸ್ತಾನ ಪರ ಘೋಷಣೆ ಕೂಗಿದ್ದೇ ಕಾರಣ, ಎಫ್ಐಆರ್ ನಲ್ಲಿ ಉಲ್ಲೇಖ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಬಳಿ ಗುಂಪು ಹಲ್ಲೆಯಿಂದ ಕೇರಳದ ವೈಯ್ನಾಡು ಜಿಲ್ಲೆಯ ವ್ಯಕ್ತಿ ಮೃತಪಟ್ಟ ಘಟನೆ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ದೀಪ್ ಕುಮಾರ್ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆಗೆ, ‘‘ಪಾಕಿಸ್ತಾನ ಪಾಕಿಸ್ತಾನ’’ ಎಂದು ಬೊಬ್ಬೆ ಹೊಡೆದಿದ್ದೇ ಕಾರಣ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಕ್ರಿಕೆಟ್ ಪಂದ್ಯದ ವೇಳೆ ಕೇರಳದ ವ್ಯಕ್ತಿ ಮೊಹಮ್ಮದ್ ಆಶ್ರಫ್, ‘‘ಪಾಕಿಸ್ತಾನ ಪಾಕಿಸ್ತಾನ’’ ಎಂದು ಘೋಷಣೆ ಕೂಗಿದ್ದ. ಆಗ ಸ್ಥಳದಲ್ಲಿ ಇದ್ದವರು ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ದೀಪಕ್ ಕುಮಾರ್ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಮತ್ತೆ ಮೂವರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ, ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಮಂಗಳೂರು ಗುಂಪು ಹಲ್ಲೆ ಪ್ರಕರಣದ ಹಿನ್ನೆಲೆ
ಮಂಗಳೂರು ನಗರದ ಕುಡುಪು ಎಂಬಲ್ಲಿ ಏಪ್ರಿಲ್ 27ರ ಭಾನುವಾರ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಮಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೇರಳದ ವಯನಾಡ್ ಜಿಲ್ಲೆಯ ಮನವಂತವಾಡಿಯ ಪುಲ್ಪಲ್ಲಿ ನಿವಾಸಿ ಮೊಹಮ್ಮದ್ ಆಶ್ರಫ್ ಅಲ್ಲಿಗೆ ಬಂದಿದ್ದ. ಸ್ಥಳದಲ್ಲಿ ಗಲಾಟೆ ಸಂಭವಿಸಿ ಆತನ ಮೇಲೆ ಹಲ್ಲೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ಮರುದಿನ ಮೃತಪಟ್ಟಿದ್ದ. ಘಟನೆಗೆ ಆತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದೇ ಕಾರಣ ಎಂದು ಹೇಳಲಾಗಿತ್ತು.
ಪಾಕಿಸ್ತಾನ ಪರ ಘೋಷಣೆ ಕೂಗಿದ್ದರಿಂದ ಆತನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದರು. ಆದರೆ ಘಟನೆಯ ಬಗ್ಗೆ ತನಿಖೆಯ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದರು. ಪಾಕಿಸ್ತಾನದ ಘೋಷಣೆ ಕೂಗಿದ್ದರಿಂದ ಗುಂಪು ಹಲ್ಲೆ ನಡೆದಿತ್ತು ಎಂಬ ಆರೋಪವಿದೆ ಎಂಬುದಾಗಿ ಗೃಹ ಸಚಿವ ಪರಮೇಶ್ವರ್ ಕೂಡ ಹೇಳಿದ್ದರು. ನಂತರ, ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಪರಮೇಶ್ವರ್ ಭರವಸೆ ನೀಡಿದ್ದರು.
ಮಂಗಳೂರು ಗುಂಪು ಹಲ್ಲೆ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿತ್ತು. ರಾಜ್ಯಸರ್ಕಾರ ಆರ್ಎಸ್ಎಸ್ ಹಾಗೂ ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಎಸ್ಡಿಪಿಐ ಆರೋಪಿಸಿತ್ತು.
ಪಾಕಿಸ್ತಾನದ ಪರ ಯಾರೇ ಘೋಷಣೆ ಕೂಗಿದರೂ ತಪ್ಪು ಎಂದಿದ್ದ ಸಿಎಂ ಸಿದ್ದರಾಮಯ್ಯ, ಗುಂಪು ಹಲ್ಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಆರೋಪಿಗಳ ಬಂಧನವಾಗಿದೆ ಎಂದು ಹೇಳಿದ್ದರು.


