ಅಪರಾಧ ಸುದ್ದಿ

ಪೊಲೀಸ್ ಸಮವಸ್ತ್ರದಲ್ಲಿಯೇ ಸುಲಿಗೆ: ನಕಲಿ PSI ಸೇರಿ ನಾಲ್ವರು ಆರೋಪಿಗಳ ಬಂಧನ

Share It

ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಸೇರಿ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಕಲಿ ಪಿಎಸ್ಐ ಮಲ್ಲಿಕಾರ್ಜುನ್, ಪ್ರಮೋದ್, ವಿನಯ್ ಮತ್ತು ಋತ್ವಿಕ್ ಎಂಬುವವರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 45 ಸಾವಿರ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ಐಷಾರಾಮಿ ಜೀವನ ನಡೆಸಬೇಕೆಂದು ಇಚ್ಚಿಸಿದ್ದ ಮಲ್ಲಿಕಾರ್ಜುನ್‌ಗೆ ಇತರೆ ಆರೋಪಿಗಳು ಸಾಥ್ ಕೊಟ್ಟಿದ್ದರು ಎನ್ನಲಾಗಿದೆ.

ದೂರುದಾರ ನವೀನ್ ಎಂಬವರನ್ನು ಹತ್ತಿರದಿಂದ ಗಮನಿಸಿದ್ದ ಹೃತ್ವಿಕ್, ಆತನ ಮನೆಗೆ ನುಗ್ಗಿದರೆ ಹಣ, ಚಿನ್ನಾಭರಣ ಸಿಗಲಿದೆ ಎಂದು ಮಲ್ಲಿಕಾರ್ಜುನ್‌ನಿಗೆ ತಿಳಿಸಿದ್ದ. ಅದರಂತೆ ಡಿಸೆಂಬರ್ 7ರಂದು ಪೊಲೀಸ್ ಸಮವಸ್ತ್ರ ಧರಿಸಿ ನವೀನ್ ಮನೆಗೆ ಕಾರಿನಲ್ಲಿ ಆರೋಪಿಗಳು ಧಾವಿಸಿದ್ದರು. ‘ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ, ಮನೆ ಶೋಧ ನಡೆಸಬೇಕು ಎಂದು ಬೆದರಿಸಿ ನವೀನ್ ಅವರ ಮೇಲೆ ಲಾಠಿ, ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದರು.

ಬಂಧನ ಮಾಡಬಾರದೆಂದರೆ ಹಣ ಕೊಡಬೇಕು ಎಂದು ಖಾತೆಯಲ್ಲಿದ್ದ 87 ಸಾವಿರ ರೂ., ಬೀರುವನಲ್ಲಿದ್ದ 53 ಸಾವಿರ ರೂ. ಹಾಗೂ ಪರ್ಸ್‌ನಲ್ಲಿದ್ದ 2 ಸಾವಿರ ರೂ. ಪಡೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ನವೀನ್ ದೂರು ನೀಡಿದ್ದರು‌.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ವಿದ್ಯಾರಣ್ಯಪುರ‌ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ 45 ಸಾವಿರ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿದ್ದಾರೆ.

ಪಿಎಸ್‌ಐ ಆಕಾಂಕ್ಷಿಯಾಗಿದ್ದ ಮಲ್ಲಿಕಾರ್ಜುನ್ ಎರಡು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣನಾಗಿರಲಿಲ್ಲ. ಆದರೂ ಸಹ ತಾನು ಉತ್ತೀರ್ಣನಾಗಿ ಪಿಎಸ್‌ಐ ಆಗಿದ್ದೇನೆ ಎಂದು ಊರಿನವರ ಮುಂದೆ ಬಿಂಬಿಸಿಕೊಂಡಿದ್ದ. ಪೊಲೀಸ್ ಸಮವಸ್ತ್ರ, ಲಾಠಿ, ಟೋಪಿ ಹಾಗೂ ಶೂ ಧರಿಸಿ ಫೋಟೋ ಶೂಟ್ ಮಾಡಿಸಿದ್ದ. ಸ್ವಗ್ರಾಮ ಸಿರಗುಪ್ಪದಲ್ಲಿ ತಾನೂ ಬೆಂಗಳೂರಲ್ಲಿ ಪಿಎಸ್‌ಐ ಆಗಿದ್ದೇನೆ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page