ಮೈಸೂರು: ಚಿನ್ನಾಭರಣ ಮಳಿಗೆಗೆ 5 ಮಂದಿ ಡಕಾಯಿತರು ಗನ್ ತೋರಿಸಿ ಸುಮಾರು 4 ರಿಂದ 5 ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದದೆ.
ಹುಣಸೂರು ಬಸ್ ನಿಲ್ದಾಣದ ಹಿಂದಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಶಾಪ್ಗೆ ಮಧ್ಯಾಹ್ನ ಸುಮಾರು 2.10 ರ ಸಮಯದಲ್ಲಿ ಬೈಕ್ನಲ್ಲಿ ಬಂದ ಐವರು ಮುಸುಕುಧಾರಿಗಳು 7-8ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ನುಗ್ಗಿ ದರೋಡೆ ಮಾಡಿದ್ದಾರೆ. 5ರಲ್ಲಿ ನಾಲ್ವರು ಮುಸುಕು ಧರಿಸಿದ್ದರು.
ಓರ್ವ ಗ್ಯಾಂಗ್ ಲೀಡರ್ ಎರಡು ಕೈಗಳಲ್ಲೂ ಗನ್ ಹಿಡಿದು ಸಿನಿಮೀಯ ಶೈಲಿಯಲ್ಲಿ ಬೆದರಿಕೆ ಹಾಕಿ, ಕೆಲವೇ ನಿಮಿಷದಲ್ಲಿ ಅಂಗಡಿಯಲ್ಲಿದ್ದ ಅಂದಾಜು 5 ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿರುವ ಮಾಹಿತಿ ಬಂದಿದೆ. ದರೋಡೆಕೋರರನ್ನು ಸಿಬ್ಬಂದಿ ಹಿಂಬಾಲಿಸಿದ್ದಾರೆ. ಆದರೆ ಹಿಡಿಯಲು ಸಾಧ್ಯವಾಗಿಲ್ಲ. ದರೋಡೆ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರಾರಿಯಾಗುವ ವೇಳೆ ಓರ್ವ ದರೋಡೆಕೋರ ಹೆಲ್ಮೆಟ್ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರ ಮಾಹಿತಿಯಿಂದ ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಬಳಸಿ ತನಿಖೆ ಕೈಗೊಂಡಿದ್ದಾರೆ. ವಿಶೇಷ ತಂಡ ರಚನೆ ಮಾಡಿ ಶೀಘ್ರವೇ ಆರೋಪಗಳನ್ನು ಪತ್ತೆಹಚ್ಚಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

