ಬೆಳಗಾವಿ : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕವಾಗಿ ಅತ್ಯಾಚಾರ ಎಸಗಿದ ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಮಹತ್ವದ ತೀರ್ಪು ನೀಡಿದೆ.
ಬೆಳಗಾವಿಯ ಸಮರ್ಥನಗರ ನಾಲ್ಕನೇ ಕ್ರಾಸಿನ
ನಿಂಗಪ್ಪ /ವಿಶಾಲ ಭೈರಪ್ಪ ಹೊಸಮನಿ (23)ಶಿಕ್ಷೆಗೊಳಗಾದ ಆರೋಪಿ. ನೊಂದ ಬಾಲಕಿ ಅಪ್ರಾಪ್ತ ವಯಸ್ಸಿನವಳು ಎಂದು ಗೊತ್ತಿದರೂ
ಆರೋಪಿ ಬಾಲಕಿಗೆ ದಿನಾಂಕ 22-04-2022 ರಂದು ಮಧ್ಯಾಹ್ನ 12:30 ಗಂಟೆಗೆ ತನ್ನ ಮನೆಗೆ ಕರೆದುಕೊಂಡು ಹೋಗಿ ಅವಳಿಗೆ ಮನೆಯಲ್ಲಿ ಅಕ್ರಮವಾಗಿ ಕೂಡಿಟ್ಟು ಲೈಂಗಿಕ ಅತ್ಯಾಚಾರ ಮಾಡಿದಲ್ಲದೆ ದಿನಾಂಕ 21-04-2024 ರಂದು ಮಹಾರಾಷ್ಟ್ರದ ಒಂದು ಲಾಡ್ಜ್ ದಲ್ಲಿ ದಿನಾಂಕ 13-05-2024 ರವರೆಗೆ ಕೂಡಿಟ್ಟು ನಿರಂತರ ಅತ್ಯಾಚಾರ ಮಾಡಿದ್ದ. ಈ ಅಪರಾಧಕ್ಕಾಗಿ ದಾಖಲಾಧಿಕಾರಿ ಮಾರ್ಕೆಟ್ ಪಿಎಸ್ ಐ ಮಹಾಂತೇಶ ಮಠಪತಿ ಪ್ರಕರಣ ದಾಖಲಿಸಿಕೊಂಡಿದ್ದರು. ಮುಂದಿನ ಕ್ರಮವನ್ನು ತನಿಖಾಧಿಕಾರಿ ಸಿಪಿಐ ಮಹಾಂತೇಶ ಕೆ. ಧಾಮಣ್ಣನವರ ಕೈಗೊಂಡಿದ್ದರು. ಪ್ರಕರಣದ ಮುಂದಿನ ತನಿಖೆ ಮಾಡಿ ಪ್ರಕರಣವನ್ನು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಮಾನ್ಯ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 09 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ, 51 ದಾಖಲೆಗಳು, 2 ಮುದ್ದೆಮಾಲು ಆಧಾರದಲ್ಲಿ ಆರೋಪಿ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದಾರೆ. ಆರೋಪಿತನಿಗೆ ಪೋಕ್ಸೊ ಕಲಂ 6 ರ ಪ್ರಕಾರ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ದಂಡ ಒಂದು ಲಕ್ಷ ರೂಪಾಯಿ, ದಂಡದ ಹಣ ತುಂಬದೇ ಇದ್ದ ಕಾಲಕ್ಕೆ 2 ವರ್ಷಗಳ ಶಿಕ್ಷೆ ವಿಧಿಸಿ ಪ್ರಕರಣದ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷಗಳನ್ನು ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿರುತ್ತದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ.ಪಾಟೀಲ ಪ್ರಕರಣ ನಡೆಸಿ ಹಾಗೂ ವಾದ ಮಂಡಿಸಿದ್ದರು.

