ರಾಜಕೀಯ ಸುದ್ದಿ

ಮುಖ್ಯಮಂತ್ರಿಯಾದರೂ ಶಿಗ್ಗಾವಿಗೆ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗದ ಬೊಮ್ಮಾಯಿ: ಡಿಸಿಎಂ ಡಿ.ಕೆ. ಶಿವಕುಮಾರ್ ತರಾಟೆ

Share It

ಹಾವೇರಿ: “17 ವರ್ಷಗಳ ಕಾಲ ಶಿಗ್ಗಾವಿಯನ್ನು ಪ್ರತಿನಿಧಿಸಿ, ರಾಜ್ಯದ ಮುಖ್ಯಮಂತ್ರಿಯಾದರೂ ಯಾವುದೇ ಸಾಕ್ಷಿಗುಡ್ಡೆಗಳನ್ನು ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಜನತೆಗೆ ನೀಡಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳಂತೆ ಒಂದೇ ಒಂದು ಗುರುತರ ಯೋಜನೆಗಳನ್ನು ಜಾರಿಗೊಳಿಸಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತರಾಟೆ ತೆಗೆದುಕೊಂಡರು.

ಶಿಗ್ಗಾವಿ ಉಪಚುನಾವಣೆ ಅಂಗವಾಗಿ ಕ್ಷೇತ್ರದ ದುಂಡಸಿಯಲ್ಲಿ ಗುರುವಾರ ನಡೆದ ಬಹಿರಂಗ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು.

“ಕೊಟ್ಟ ಮಾತನ್ನು ಉಳಿಸಿಕೊಳ್ಳದ ಬೊಮ್ಮಾಯಿ ಅವರ ನಡೆಯ ಬಗ್ಗೆ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ. ಬಸವರಾಜ ಬೊಮ್ಮಾಯಿ ಅವರೇ ನೀವು ಎರಡೂವರೆ ವರ್ಷಗಳ ಕಾಲ ಸಿಎಂ ಆಗಿದ್ದಿರಿ, ಜೊತೆಗೆ ಕೇಂದ್ರದಲ್ಲಿಯೂ ನಿಮ್ಮ ಸರ್ಕಾರ ಅಧಿಕಾರದಲ್ಲಿತ್ತು. ಅಧಿಕಾರ ಇದ್ದರೂ ನಿಮ್ಮ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಏನು? ಯಾವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಿದ್ದೀರಿ?” ಎಂದು ಪ್ರಶ್ನಿಸಿದರು.

ಮಹದಾಯಿಗೆ ಅನುಮತಿ ಕೊಡಿಸಲಿಲ್ಲ: “ಬೊಮ್ಮಾಯಿ ಅವರು ಮಹದಾಯಿ ಯೋಜನೆಗೆ ಅನುಮತಿ ಸಿಕ್ಕೇಬಿಟ್ಟಿತು ಎಂದು ಪಟಾಕಿ ಹೊಡೆದು ಸಂಭ್ರಮಿಸಿದರು. ಆದರೆ ಇದಕ್ಕೆ ಕೇಂದ್ರ ಪರಿಸರ ಇಲಾಖೆಯವರು ಇನ್ನೂ ಅನುಮತಿ ಕೊಟ್ಟಿಲ್ಲ. ಬಿಜೆಪಿಯಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದರು. ಇದುವರೆಗೂ ಸಾಮಾನ್ಯ ಜನರ ಬದುಕಿಗೆ ಯಾವ ಸಹಾಯವನ್ನೂ ಬಿಜೆಪಿ ಮಾಡಿಲ್ಲ” ಎಂದರು.

“ಶಿಗ್ಗಾವಿ ಪಕ್ಕದ ಸೊರಬ ಕ್ಷೇತ್ರದಿಂದ ಬಂಗಾರಪ್ಪ ಅವರು ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಆ ಸಮಯದಲ್ಲಿ ಆರಾಧನಾ, ಆಶ್ರಯ, ವಿಶ್ವ – ಹೀಗೆ ಹಲವಾರು ಬಡವರ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ರೈತರ ಪಂಪಸೆಟ್ ಗೆ ಉಚಿತ ವಿದ್ಯುತ್ ಯೋಜನೆ ಕೊಟ್ಟರು” ಎಂದು ತಿಳಿಸಿದರು.

“ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಗರ್ ಹುಕುಂ ಅರ್ಜಿ ಹಾಕಿಸಿ ರೈತರಿಗೆ ಜಮೀನು ನೀಡುವ ಮಹತ್ತರವಾದ ಕೆಲಸ ಆರಂಭವಾಯಿತು. ದೇವರಾಜ ಅರಸು ಅವರ ಕಾಲದಲ್ಲಿ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದು, ಉಳುವವನೇ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತರಲಾಯಿತು. ಇಂದಿರಾ ಗಾಂಧಿ ಅವರು ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿದರು. ಇದರಿಂದ ಸಾಲ ಪಡೆದು ಹೆಚ್ಚು ಬಡ್ಡಿಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದ ಜನರನ್ನು ಕಾಪಾಡಿದರು. ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಅಶಕ್ತರಿಗೆ ನೀಡಲಾಯಿತು” ಎಂದರು.

“ಎಸ್.ಎಂ.ಕೃಷ್ಣ ಅವರು ಮಕ್ಕಳಿಗೆ ಬಿಸಿಯೂಟ, ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಮಹಿಳೆಯರನ್ನು ಸಂಘಟಿಸಿದರು. ನಾವು 2023 ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ತಕ್ಷಣ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿದೆವು. ಏಕೆಂದರೆ ಬಿಜೆಪಿಯ ದುರಾಡಳಿತದಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿತ್ತು. ಆದ ಕಾರಣಕ್ಕೆ ನಾವು ಮಹಿಳೆಯರ ಅಭಿಪ್ರಾಯ ಪಡೆದು ಶಕ್ರಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಎನ್ನುವ ಐದು ಗ್ಯಾರಂಟಿಗಳನ್ನು ಮನೆ, ಮನೆಗೆ ಮುಟ್ಟಿಸುತ್ತಿದ್ದೇವೆ” ಎಂದರು.


Share It

You cannot copy content of this page