2026ಕ್ಕೆ ಕಾಲಿಡಲು ಇನ್ನೇನು ಕ್ಷಣಗಳು ಮಾತ್ರ ಬಾಕಿ. ಹೊಸ ವರ್ಷ ಬರ್ತಿದ್ದಂತೆ ಎಲ್ಲೆಡೆ ಸಂಭ್ರಮದ ವಾತಾವರಣ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವು ಪ್ರದೇಶಗಳು ಈಗಾಗಲೇ ಸಿಂಗಾರಗೊಂಡಿವೆ. ಆದರೆ ಹೊಸವರ್ಷವನ್ನು ಆಚರಿಸಲು ಹೊರಗೇ ಹೋಗಬೇಕು ಎಂಬ ನಿಯಮವೇನೂ ಇಲ್ಲ.
ಹೊರಗಡೆ ಪಾರ್ಟಿ ಜೋರು:
ಸಾಮಾನ್ಯವಾಗಿ ಹೊಸ ವರ್ಷದ ದಿನ ಪಬ್, ಬಾರ್, ರೆಸ್ಟೋರೆಂಟ್, ಬೀಚ್‌ಗಳಲ್ಲಿ ಭಾರಿ ಜನಸಂದಣಿ ಇರುತ್ತದೆ. ಮ್ಯೂಸಿಕ್, ಡ್ಯಾನ್ಸ್, ಮದ್ಯ, ಆಹಾರಗಳ ನಡುವೆ ಸಾವಿರಾರು ರೂಪಾಯಿಗಳು ಖರ್ಚಾಗುವುದು ಸಾಮಾನ್ಯ. ಗದ್ದಲ, ಟ್ರಾಫಿಕ್, ತೊಂದರೆಗಳೂ ಜೊತೆಯಾಗುತ್ತವೆ.
ಮನೆಯಲ್ಲೇ ಆರಾಮದ ಸಂಭ್ರಮ:
ಇವೆಲ್ಲವನ್ನ ತಪ್ಪಿಸಿ ಮನೆಯಲ್ಲೇ ಕುಟುಂಬ, ಸ್ನೇಹಿತರು, ಆಪ್ತರೊಂದಿಗೆ ಹೊಸ ವರ್ಷವನ್ನು ಹಬ್ಬದಂತೆ ಆಚರಿಸಬಹುದು. ಅದು ಕೂಡ ಕಡಿಮೆ ಖರ್ಚಿನಲ್ಲಿ, ಹೆಚ್ಚು ಸಂತೋಷದೊಂದಿಗೆ. ಮನೆಯಲ್ಲೇ ಹೊಸವರ್ಷವನ್ನು ಎಂಜಾಯ್ ಮಾಡುವ ಕೆಲವು ಸರಳ ಐಡಿಯಾಗಳು ಇಲ್ಲಿವೆ.
ಮನೆ ಅಲಂಕಾರ:
ಬಣ್ಣಬಣ್ಣದ ಲೈಟ್ಸ್, ಬಲೂನ್, ಕಾಗದದ ಸ್ಟ್ರೀಮರ್‌ಗಳು ಬಳಸಿ ಹಾಲ್ ಅಥವಾ ಬಾಲ್ಕನಿಯನ್ನು ಅಲಂಕರಿಸಿ. ಸಣ್ಣ ಅಲಂಕಾರವೇ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿಸುತ್ತದೆ.
ಮ್ಯೂಸಿಕ್ ಮತ್ತು ಡ್ಯಾನ್ಸ್ ಟೈಮ್:
ಎಲ್ಲರಿಗೂ ಇಷ್ಟವಾಗುವ ಹಾಡುಗಳ ಪ್ಲೇಲಿಸ್ಟ್ ತಯಾರಿಸಿ. ಹಾಡು ಕೇಳುತ್ತಾ ಡ್ಯಾನ್ಸ್, ಒಟ್ಟಿಗೆ ಹಾಡುವುದು, ಎರಡು ತಂಡ ಮಾಡಿ ಅಂತ್ಯಾಕ್ಷರಿ ಆಡುವುದು ಪಾರ್ಟಿಗೆ ಇನ್ನಷ್ಟು ಜೋಶ್ ಕೊಡುತ್ತದೆ.
ಪಾಟ್‌ಲಕ್ ಫುಡ್ ಪಾರ್ಟಿ:
ಸ್ನೇಹಿತರು ಅಥವಾ ಬಂಧುಗಳನ್ನು ಆಹ್ವಾನಿಸಿ ಪಾಟ್‌ಲಕ್ ಪಾರ್ಟಿ ಆಯೋಜಿಸಿ. ಪ್ರತಿಯೊಬ್ಬರೂ ಒಂದೊಂದು ಸ್ಪೆಷಲ್ ಡಿಶ್ ತಂದು ಎಲ್ಲರೂ ಒಟ್ಟಿಗೆ ಆಸ್ವಾದಿಸಿ. ಹರಟೆ, ನಗು, ಊಟ—all in one.
ಸಿಂಪಲ್ ಫೋಟೋ ಬೂತ್:
ಮನೆಯ ಒಂದು ಮೂಲೆಯಲ್ಲಿ ಸಣ್ಣ ಫೋಟೋ ಬೂತ್ ಸಿದ್ಧಪಡಿಸಿ. “ಹ್ಯಾಪಿ ನ್ಯೂ ಇಯರ್” ಎಂದು ಬರೆದು, ಲೈಟ್ಸ್, ಬಲೂನ್ ಹಾಕಿ ಫೋಟೋ ತೆಗೆದುಕೊಳ್ಳಿ. ಈ ಕ್ಷಣಗಳು ಮುಂದಿನ ದಿನಗಳಲ್ಲಿ ಸಿಹಿ ನೆನಪಾಗುತ್ತವೆ.
ಮೋಜಿನ ಆಟಗಳು:
ಮ್ಯೂಸಿಕಲ್ ಚೇರ್, 2025ರ ನೆನಪುಗಳನ್ನು ಶೇರ್ ಮಾಡುವುದು, ಸಣ್ಣ ಕ್ವಿಜ್, ಹೊಸ ವರ್ಷದ ರೆಸಲ್ಯೂಷನ್ ಹೇಳುವುದು—ಇಂಥ ಆಟಗಳು ಪಾರ್ಟಿಗೆ ಜೀವ ತುಂಬುತ್ತವೆ.
ಹೊಸವರ್ಷ ಅಂದ್ರೆ ಗದ್ದಲವೇ ಬೇಕೆಂದಿಲ್ಲ. ಮನೆಯಲ್ಲೇ ಶಾಂತವಾಗಿ, ಪ್ರೀತಿಯವರ ಜೊತೆ ಸರಳವಾಗಿ ಆಚರಿಸಿದರೂ ಅದೇ ನಿಜವಾದ ಸಂಭ್ರಮ.

