ಅಮೆರಿಕದ ವಲಸೆ ನಿಯಮಗಳು ಇನ್ನಷ್ಟು ಕಠಿಣ: ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ರದ್ದತಿ–ಗಡೀಪಾರು ಎಚ್ಚರಿಕೆ
ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ತೆರಳಲು ಯೋಜಿಸಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ. ವಲಸೆ ಕಾನೂನುಗಳನ್ನು ಉಲ್ಲಂಘಿಸಿದರೆ ವಿದ್ಯಾರ್ಥಿ ವೀಸಾವನ್ನು ರದ್ದುಗೊಳಿಸಿ, ದೇಶದಿಂದ ಹೊರಹಾಕುವ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಈ ಬಿಗಿಯಾದ ನಿಲುವು ಸಾವಿರಾರು ವಿದ್ಯಾರ್ಥಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.
ವಾಷಿಂಗ್ಟನ್/ನವದೆಹಲಿ (ಜ.7): ಅಮೆರಿಕದ ವಲಸೆ ನಿಯಮಗಳ ಪಾಲನೆ ಕಡ್ಡಾಯವಾಗಿದ್ದು, ಯಾವುದೇ ರೀತಿಯ ಉಲ್ಲಂಘನೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅಮೆರಿಕ ಸರ್ಕಾರ ಎಚ್ಚರಿಸಿದೆ. ನಿಯಮ ಮೀರಿ ವರ್ತಿಸಿದರೆ ಗಡೀಪಾರು ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದೆ.
ವೀಸಾ ರದ್ದತಿ ಮತ್ತು ಭವಿಷ್ಯದ ಪ್ರವೇಶಕ್ಕೆ ಅಡ್ಡಿ
ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬುಧವಾರ (ಜನವರಿ 7, 2026) ಅಧಿಕೃತ ಪ್ರಕಟಣೆ ಹೊರಡಿಸಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ವಿದ್ಯಾರ್ಥಿ ವೀಸಾವನ್ನು ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ತಿಳಿಸಿದೆ. ಬಂಧನಕ್ಕೊಳಗಾದಲ್ಲಿ ಕೇವಲ ಗಡೀಪಾರು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಅಮೆರಿಕ ವೀಸಾ ಪಡೆಯುವ ಹಕ್ಕನ್ನೂ ಕಳೆದುಕೊಳ್ಳಬೇಕಾಗಬಹುದು ಎಂದು ಎಚ್ಚರಿಸಲಾಗಿದೆ.
‘ವೀಸಾ ಹಕ್ಕಲ್ಲ, ಸವಲತ್ತು’
ವಿದ್ಯಾರ್ಥಿಗಳಿಗೆ ನಿಯಮಗಳ ಮಹತ್ವವನ್ನು ಒತ್ತಿ ಹೇಳಿರುವ ರಾಯಭಾರ ಕಚೇರಿ, ಅಮೆರಿಕದ ವೀಸಾ ಎಂಬುದು ಹಕ್ಕಲ್ಲ, ಸರ್ಕಾರ ನೀಡುವ ಸವಲತ್ತು ಎಂದು ಸ್ಪಷ್ಟಪಡಿಸಿದೆ. ನಿಯಮಗಳನ್ನು ಉಲ್ಲಂಘಿಸಿ ನಿಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಅವಕಾಶಗಳನ್ನು ಅಪಾಯಕ್ಕೆ ತಳ್ಳಬೇಡಿ ಎಂದು ಅಮೆರಿಕದ ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಸಂದೇಶ ನೀಡಲಾಗಿದೆ.
ಅಕ್ರಮ ವಲಸಿಗರ ವಿರುದ್ಧವೂ ಕಠಿಣ ಕ್ರಮ
ವಿದ್ಯಾರ್ಥಿಗಳಷ್ಟೇ ಅಲ್ಲದೆ, ಅಕ್ರಮವಾಗಿ ಅಮೆರಿಕ ಪ್ರವೇಶಿಸಿರುವ ವಲಸಿಗರ ಮೇಲೂ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ವಲಸೆ ಕಾನೂನು ಉಲ್ಲಂಘಿಸಿದರೆ ಕ್ರಿಮಿನಲ್ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ವಿದೇಶಿ ಪ್ರಜೆಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ದೇಶದಿಂದ ಹೊರಹಾಕುವ ಕ್ರಮವನ್ನು ಚುರುಕುಗೊಳಿಸಲಾಗಿದೆ.
H-1B ಮತ್ತು ವಿದ್ಯಾರ್ಥಿ ವೀಸಾಗಳಿಗೆ ಬಿಗಿ ನಿಯಮ
ಉದ್ಯೋಗ ಆಧಾರಿತ H-1B ವೀಸಾ ಹಾಗೂ ವಿದ್ಯಾರ್ಥಿ ವೀಸಾ ನಿಯಮಗಳನ್ನು ಅಮೆರಿಕ ಸರ್ಕಾರ ಮತ್ತಷ್ಟು ಕಠಿಣಗೊಳಿಸಿದೆ. ಇದರ ಪರಿಣಾಮವಾಗಿ ವಿದೇಶಿ ವಿದ್ಯಾರ್ಥಿಗಳ ಆಗಮನದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶದಲ್ಲಿ ಶೇ.17 ರಷ್ಟು ಕುಸಿತವಾಗಿದ್ದು, 2024ರ ಆಗಸ್ಟ್ ವೇಳೆಗೆ ಇದು ಶೇ.19ಕ್ಕೆ ಏರಿಕೆಯಾಗಿದೆ. ಇದು 2021 ನಂತರದ ಅತೀ ಕಡಿಮೆ ಮಟ್ಟವಾಗಿದೆ.
ಭಾರತ–ಅಮೆರಿಕ ಸಂಬಂಧಗಳ ಮೇಲೆ ನೆರಳು?
ಇತ್ತೀಚಿನ ತಿಂಗಳುಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಇದರ ಪರಿಣಾಮ ವಲಸೆ ಮತ್ತು ವೀಸಾ ನೀತಿಗಳ ಮೇಲೂ ಬೀರುತ್ತಿದೆ ಎನ್ನಲಾಗುತ್ತಿದೆ. ಅಮೆರಿಕದ ಈ ಕಠಿಣ ನಿಲುವು ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಹೆಚ್ಚಿಸಿದೆ.


