ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾ. ಮಡಬದಲ್ಲಿ ಜೆಸಿಬಿ ಗರ್ಜನೆ: 15ಕೋಟಿ ರೂ. ಮೌಲ್ಯದ 27 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

Share It


ಹಾಸನ: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆ ಅರಣ್ಯಾಧಿಕಾರಿಗಳು ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿಯ ಮಡಬ ಗ್ರಾಮದಲ್ಲಿ 27 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಿದ್ದಾರೆ.

ಮಡಬ ಗ್ರಾಮದ ಸರ್ವೆ ನಂ. 27ರಲ್ಲಿ ಸುಮಾರು 10-15 ಕೋಟಿ ರೂ. ಬೆಲೆ ಬಾಳುವ 26 ಎಕರೆ 33 ಗುಂಟೆ ಅರಣ್ಯ ಜಮೀನನ್ನು ಕೆಲವರು ಒತ್ತುವರಿ ಮಾಡಿ, ಇಲ್ಲಿದ್ದ ಮರಗಳನ್ನು ಕಡಿದು ತೋಟ ಮಾಡುವ ದುಸ್ಸಾಹಸ ಮಾಡಿದ್ದರು. ಈ ಬಗ್ಗೆ ಕಚೇರಿಗೆ ಬಂದ ದೂರು ಆಧರಿಸಿ ಈಶ್ವರ ಖಂಡ್ರೆ, ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಕಳೆದ ಅಕ್ಟೋಬರ್ 23ರಂದು ಸ್ಪಷ್ಟ ಸೂಚನೆ ನೀಡಿದ್ದರು.

ಸದರಿ ಜಮೀನು ಮೀಸಲು ಅರಣ್ಯವಾಗಿದ್ದು, ಅರಣ್ಯ ಒತ್ತುವರಿ ಮಾಡಿ ಮರ, ಗಿಡ ನಾಶ ಮಾಡಿ, ತೋಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಇಂದು ಬೆಳಗ್ಗೆ ಜೆಸಿಬಿಯೊಂದಿಗೆ ಸ್ಥಳಕ್ಕೆ ತೆರಳಿ, ಅರಣ್ಯ ಭೂಮಿ ತೆರವು ಮಾಡಿ, ಸ್ಥಳೀಯ ಪ್ರಬೇಧದ ಸಸಿಗಳನ್ನು ನೆಟ್ಟು, ಫಲಕ ಹಾಕಿದ್ದಾರೆ.

ಖಂಡ್ರೆ ಕ್ರಮಕ್ಕೆ ಗ್ರಾಮಸ್ಥರ ಮೆಚ್ಚುಗೆ:ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಶುಂಠಿ ಬೆಳೆಯುವ ಹೆಸರಲ್ಲಿ ಕೆಲವರು ನಕಲಿ ದಾಖಲೆ ಸೃಷ್ಟಿಸಿಕೊಂಡು, ಅರಣ್ಯ ಭೂಮಿ ಕಬಳಿಸಿ, ಬೆಲೆ ಬಾಳುವ ಮರ ಕಡಿದು ನಂತರ ತೋಟ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಅರಣ್ಯ ಭೂಮಿಯನ್ನು ಅಕ್ರಮ ಮಂಜೂರಾತಿ ಮಾಡುತ್ತಿದ್ದಾರೆ. ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ಮೇಲೆ ಇಂತಹ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ ಎಂದು ತಿಳಿಸಿದ್ದಾರೆ.

ಎಚ್ಚರಿಕೆಯ ಗಂಟೆ:ಅರಣ್ಯ ಭೂಮಿಯನ್ನು ಮನಸೋಇಚ್ಛೆ ಒತ್ತುವರಿ ಮಾಡಿ ತೆಂಗು, ಕಾಫಿ ಮತ್ತು ಅಡಿಕೆ ತೋಟ ಮಾಡುತ್ತಿದ್ದವರಿಗೆ ಮಡಬ ಅರಣ್ಯ ತೆರವು ಎಚ್ಚರಿಕೆಯ ಗಂಟೆಯಾಗಿದೆ. ಇಂದಿನ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಮತ್ತಿತರರು ಭಾಗಿಯಾಗಿದ್ದರು.


Share It

You May Have Missed

You cannot copy content of this page