ಬೆಂಗಳೂರು: ನಕಲಿ ಜನ್ಮದಿನಾಂಕದ ದಾಖಲೆಗಳನ್ನು ನೀಡಿ, ಹುದ್ದೆಗೆ ನೇಮಕಗೊಂಡ ಆರೋಪದಲ್ಲಿ ಬ್ಯಾಡರಹಳ್ಳಿ ಪಿಎಸ್ ಐ ಕಾಶಿಲಿಂಗೇಗೌಡ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
2017 ರಲ್ಲಿ ಪಿಎಸ್ ಐ ಹುದ್ದೆಗೆ ನೇಮಕಗೊಳ್ಳಲು ತಮ್ಮ ಜನ್ಮದಿನಾಂಕವನ್ನು ಏ.15, 1987 ರ ಬದಲಿಗೆ ಏ.15, 1988 ಎಂದು ತಿದ್ದಿರುವ ಆರೋಪ ಕಾಶಿಲಿಂಗೇಗೌಡ ಅವರ ಮೇಲಿದೆ. ಈ ಸಂಬಂಧ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಸ್.ಟಿ. ಚಂದ್ರಶೇಖರ್ ಎಂಬುವವರು ದೂರು ನೀಡಿದ್ದಾರೆ.
2017-18 ರ ಸಾಲಿನಲ್ಲಿ ಪಿಎಸ್ ಐ ಹುದ್ದೆ ನೇಮಕಕ್ಕೆ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆಗ 2018 ರ ಮಾರ್ಚ್ ಗೆ ವಯಸ್ಸು 30 ವರ್ಷ ಮೀರಿರಬಾರದು ಎಂಬ ಷರತ್ತು ವಿಧಿಸಿತ್ತು. ಹೀಗಾಗಿ, ತಮ್ಮ ಅಂಗನವಾಡಿ ಕೇಂದ್ರದ ಚುಚ್ಚುಮದ್ದು ದಾಖಲೆಗಳನ್ನು ತಿರುಚಿ, ತಮ್ಮ ಜನ್ಮದಿನವನ್ನು 1988 ರ ಏ.15 ಎಂದು ಬರೆಸಿದ್ದರು.
ಇದೇ ಆಧಾರದ ಮೇಲೆ ಕುಣಿಗಲ್ ಜೆಎಂಎಫ್ ಸಿಯಲ್ಲಿ ದಾವೆ ಹೂಡಿ, ನ್ಯಾಯಾಲಯದ ಡಿಕ್ರಿ ಅನ್ವಯ ತಮ್ಮ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿಸಿಕೊಂಡು, ಹುದ್ದೆ ಗಿಟ್ಟಿಸಿಕೊಂಡಿದ್ದರು ಎನ್ನಲಾಗಿದೆ. ಇದೀಗ ಅವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.