ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದಲ್ಲಿ ಹೊಸವರ್ಷದ ದಿನದಿಂದ ಕಾಣೆಯಾಗಿದ್ದ 27 ವರ್ಷದ ಭಾರತೀಯ ಯುವತಿ ನಿಕಿತಾ ಗೋದಿಶಾಲಾ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ದೇಹದಲ್ಲಿ ಚೂರಿಯಿಂದ ಇರಿದ ಗಾಯಗಳಿದ್ದು, ಈ ಘಟನೆ ಕೊಲೆ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯಂತೆ, ನಿಕಿತಾ ತನ್ನ ಗೆಳೆಯನ ಅಪಾರ್ಟ್ಮೆಂಟ್ನಲ್ಲಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೊಸವರ್ಷದ ರಾತ್ರಿ ನಂತರ ಆಕೆ ಸಂಪರ್ಕಕ್ಕೆ ಸಿಗದ ಕಾರಣ ಆತಂಕ ಹೆಚ್ಚಾಗಿತ್ತು. ನಂತರ ನಡೆದ ತನಿಖೆಯಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ನಿಕಿತಾ ಗೋದಿಶಾಲಾ ಮೇರಿಲ್ಯಾಂಡ್ನ ಕೊಲಂಬಿಯಾ ನಗರದಲ್ಲಿರುವ ವೇದಾ ಹೆಲ್ತ್ ಸಂಸ್ಥೆಯಲ್ಲಿ ಡಾಟಾ ಮತ್ತು ಸ್ಟ್ರಾಟಜಿ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಜನವರಿ 2ರಂದು ಆಕೆಯ ಗೆಳೆಯ ಅರ್ಜುನ್ ಶರ್ಮಾ ನಾಪತ್ತೆ ದೂರು ದಾಖಲಿಸಿದ್ದಾನೆ. ಆದರೆ ಅದೇ ದಿನ ಆರೋಪಿಯೇ ಭಾರತಕ್ಕೆ ತೆರಳಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಹೋವರ್ಡ್ ಕೌಂಟಿ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಮಾಹಿತಿಯಂತೆ, ಕೊಲಂಬಿಯಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಯುವತಿಯ ಶವ ಪತ್ತೆಯಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಅರ್ಜುನ್ ಶರ್ಮಾ ವಿರುದ್ಧ ಪ್ರಥಮ ಹಾಗೂ ದ್ವಿತೀಯ ಹಂತದ ಕೊಲೆ ಆರೋಪಗಳ ಮೇಲೆ ಬಂಧನ ವಾರಂಟ್ ಪಡೆಯಲಾಗಿದೆ.
ಡಿಸೆಂಬರ್ 31ರ ಸಂಜೆ 7 ಗಂಟೆಯ ನಂತರ ನಿಕಿತಾ ಹತ್ಯೆ ನಡೆದಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಪರಾರಿಯಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಪತ್ತೆಹಚ್ಚಿ ಬಂಧಿಸಲು ಅಮೆರಿಕದ ಫೆಡರಲ್ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿ ಅಮೆರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ನಿಕಿತಾ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ಕಾನ್ಸುಲರ್ ನೆರವನ್ನು ಒದಗಿಸುತ್ತಿರುವುದಾಗಿ ತಿಳಿಸಿದೆ. ಅಲ್ಲದೇ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಕರಣವನ್ನು ಗಮನಿಸುತ್ತಿರುವುದಾಗಿ ರಾಯಭಾರ ಕಚೇರಿ ಹೇಳಿದೆ.
ಭಾರತ ಮತ್ತು ಅಮೆರಿಕ ನಡುವೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಹಕಾರಕ್ಕೆ ಅವಕಾಶ ಕಲ್ಪಿಸುವ ಹಸ್ತಾಂತರ ಒಪ್ಪಂದವಿದೆ. ಆದರೆ ಇಂತಹ ಪ್ರಕ್ರಿಯೆಗಳಿಗೆ ನ್ಯಾಯಾಲಯದ ಪರಿಶೀಲನೆ ಹಾಗೂ ರಾಜತಾಂತ್ರಿಕ ಕ್ರಮಗಳು ಅಗತ್ಯವಿರುವುದರಿಂದ, ಇದಕ್ಕೆ ಕೆಲ ತಿಂಗಳುಗಳ ಕಾಲ ಬೇಕಾಗುವ ಸಾಧ್ಯತೆ ಇದೆ.

