ಸುದ್ದಿ

50 ಅಡಿ ಆಳದ ಬಾವಿಗೆ ಬಿದ್ದ ಎರಡು ವರ್ಷದ ಮಗು: ಜೀವದ ಹಂಗು ತೊರೆದು ರಕ್ಷಿಸಿದ ವ್ಯಕ್ತಿ

Share It

ಶಿರಸಿ (ಉತ್ತರ ಕನ್ನಡ): ಆಟವಾಡುತ್ತಿದ್ದ ಎರಡು ವರ್ಷದ ಪುಟ್ಟ ಮಗುವೊಂದು ಆಕಸ್ಮಿಕವಾಗಿ 50 ಅಡಿ ಆಳದ ಬಾವಿಗೆ ಬಿದ್ದರೂ, ಸ್ಥಳೀಯ ವ್ಯಕ್ತಿಯೊಬ್ಬರ ಸಮಯಪ್ರಜ್ಞೆ ಮತ್ತು ಸಾಹಸದಿಂದ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿರುವ ರೋಚಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಸ್ತೂರಬಾ ನಗರದಲ್ಲಿ ನಡೆದಿದೆ.

ಕಸ್ತೂರಬಾ ನಗರದ ನಿವಾಸಿಯಾದ ಭುವಿ ಎಂಬ ಎರಡು ವರ್ಷದ ಮಗು ಸೋಮವಾರ ಮಧ್ಯಾಹ್ನ ಎಂದಿನಂತೆ ಮನೆ ಅಂಗಳದಲ್ಲಿ ಆಟವಾಡುತ್ತಿತ್ತು. ಮನೆಯವರೆಲ್ಲ ಕೆಲಸದಲ್ಲಿ ಮಗ್ನರಾಗಿದ್ದಾಗ, ಮಗು ಆಟವಾಡುತ್ತಾ ಮುಂಭಾಗದಲ್ಲಿದ್ದ ತೆರೆದ ಬಾವಿಗೆ ಬಿದ್ದಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ಮಗು ಕಾಣದಿದ್ದಾಗ ಆತಂಕಗೊಂಡ ಮನೆಯವರು ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿಬಂದಾಗ ಮನೆಯವರ ಎದೆಬಡಿತ ಜೋರಾಗಿದೆ.

ಮಗು ಬಾವಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ನಿವಾಸಿ ಹಾಗೂ ಸಮಾಜ ಸೇವಕ ಪಯ್ಯು ಚವಟಿ, ತಕ್ಷಣವೇ ಕಾರ್ಯಪ್ರವೃತ್ತರಾದರು. ಸುಮಾರು 50 ಅಡಿ ಆಳವಿದ್ದ ಕಗ್ಗತ್ತಲ ಬಾವಿಗೆ ಹಗ್ಗದ ಸಹಾಯದಿಂದ ಪ್ರಾಣದ ಹಂಗು ತೊರೆದು ಇಳಿದಿದ್ದಾರೆ. ಬಾವಿಯ ಒಳಗಿದ್ದ ಮೋಟಾರ್ ಪೈಪ್‌ಗೆ ಮಗುವಿನ ಬಟ್ಟೆ ಸಿಲುಕಿಕೊಂಡಿದ್ದರಿಂದ, ಮಗು ನೀರಿನಲ್ಲಿ ಮುಳುಗದೇ ಪೈಪ್ ಆಸರೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಾವಿನೊಂದಿಗೆ ಹೋರಾಡುತ್ತಿತ್ತು. ಪಯ್ಯ,  ಜಾಗರೂಕತೆಯಿಂದ ಮಗುವನ್ನು ಎತ್ತಿಕೊಂಡು ಸುರಕ್ಷಿತವಾಗಿ ಹೊರಬಂದಿದ್ದಾರೆ.

ಅಷ್ಟು ಎತ್ತರದಿಂದ ಬಿದ್ದಿದ್ದರೂ ಮಗುವಿಗೆ ಸಣ್ಣ ಗಾಯವೂ ಆಗದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಗು ಸುರಕ್ಷಿತವಾಗಿ ಮೇಲೆ ಬರುತ್ತಿದ್ದಂತೆಯೇ ಅಜ್ಜಿ ಜಯಮ್ಮ ಹಾಗೂ ಕುಟುಂಬಸ್ಥರು ಭಾವುಕರಾಗಿ ಕಣ್ಣೀರು ಹಾಕಿದರು. ಮಗುವನ್ನು ರಕ್ಷಿಸಿದ ಪಯ್ಯ ಚವಟಿ ಸಾಹಸಕ್ಕೆ ಇಡೀ ನಗರದಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.


Share It

You cannot copy content of this page