ಉಪಯುಕ್ತ ಸಿನಿಮಾ

ಆನೇಕಲ್ ಭೂ ಸ್ವಾಧೀನ ಹೋರಾಟ : ಕೈಗಾರಿಕಾ ಸಚಿವರ ಜತೆ ಸಚಿವ ರಾಮಲಿಂಗಾ ರೆಡ್ಡಿ ಸಭೆ, ರೈತ ಹೋರಾಟಗಾರರ ಹರ್ಷ

Share It

ಬೆಂಗಳೂರು: ಆನೇಕಲ್ ತಾಲ್ಲೂಕಿನ ಕೃಷಿ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಸಚಿವರ ಜತೆಗೆ ಸಭೆ ನಡೆಸಿ, ರೈತರ ಜಮೀನು ಉಳಿಸುವ ಸಂಬಂಧ ಸಭೆ ನಡೆಸಲು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ತೀರ್ಮಾನಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಕೈಗಾರಿಕಾ ಸಚಿವ M.B. ಪಾಟೀಲ್ ಅವರ ಜತೆಗೆ ಸಭೆ ನಿಗಧಿಯಾಗಿದ್ದು, 13 ಆಗಸ್ಟ್ 2025ರಂದು ಆನೇಕಲ್ ತಾಲ್ಲೂಕಿನ ರೈತರ ನಿಯೋಗದೊಂದಿಗೆ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ತಾಲ್ಲೂಕಿನಲ್ಲಿ KIADB ಹೊರಡಿಸಿರುವ 2,451 ಎಕರೆ ಭೂ ಸ್ವಾಧೀನ ಅಧಿಸೂಚನೆ ಕೈಬಿಡುವ ಬಗ್ಗೆ ಕೈಗಾರಿಕಾ  ಸಚಿವರೊಂದಿಗೆ ಸಭೆ ನಿಗಧಿಪಡಿಸಿ ತಾಲ್ಲೂಕಿನ ಕೃಷಿ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ತಾವು ಸರ್ಕಾರದ ಮಟ್ಟದಲ್ಲಿ ಸಹಕರಿಸಬೇಕೆಂದು ಹೋರಾಟಗಾರರು ಮನವಿ ಮಾಡಿದ್ದರು.

ಸಚಿವ ರಾಮಲಿಂಗಾ ರೆಡ್ಡಿ ಅವರು, ಸದನ ನಡೆಯುತ್ತಿರುವುದರಿಂದ ಸದನ ಮುಗಿದ ತಕ್ಷಣ ನಿಮಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದ್ದರು.  ರಾಮಲಿಂಗಾ ರೆಡ್ಡಿಯವರು, ಎಂ ಬಿ ಪಾಟೀಲ್ ರವರೊಡನೆ ಚರ್ಚಿಸಿ 26 ಆಗಸ್ಟ್ 2025, ರಂದು ಮಂಗಳವಾರ ಬೆಳಿಗ್ಗೆ ತಾಲೂಕಿನ ಶಾಸಕರು ಸೇರಿ 15 ಜನ ರೈತ ಮುಖಂಡರ ನಿಯೋಗದೊಂದಿಗೆ ಸಭೆ ನಿಗದಿಪಡಿಸಿದ್ದಾರೆ.

ಈ ಹಿಂದೆ ಡಿಸೆಂಬರ್ 2024 ರಲ್ಲಿ ರೈತರ ನಿಯೋಗದೊಂದಿಗೆ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಸಂಧರ್ಭದಲ್ಲಿ ಅವರು ರೈತರ ಮನೆಗಳು, ಪಾಲಿಹೌಸ್, ಫಲವತ್ತಾದoತಹ ಕೃಷಿ ಮತ್ತು ತೋಟಗಾರಿಕಾ ಭೂಮಿಗಳನ್ನು ಭೂಸ್ವಾಧೀನದಿಂದ ಕೈ ಬಿಡಬೇಕೆಂದು ಕೈಗಾರಿಕಾ ಮಂತ್ರಿಗಳಿಗೆ ಪತ್ರ ಮುಖೇನ ಒತ್ತಾಯಿಸಿದ್ದರು.

ಅಲ್ಲದೇ  2006 ರಲ್ಲಿ ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ KIADB ಸಂಸ್ಥೆಯು 1,260  ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನಪಡಿಸಿ ಹೊರಡಿಸಿದ್ದ ಅಧಿಸೂಚನೆ ಹಿಂಪಡೆಯುವ ನಿಟ್ಟಿನಲ್ಲಿ ಅವರು, ಅಂದು‌ ವಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ‌ಖರ್ಗೆ ಅವರಿಗೆ ವಿವರಿಸಿ ಅವರನ್ನ ಅಂದಿನ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಹತ್ತಿರ‌ ಕರೆದುಕೊಂಡು‌ ಹೋಗಿ (ರಾಜ್ಯದಲ್ಲಿ ರಾಜ್ಯಾಪಾಲರ ಆಡಳಿತವಿದ್ದಾಗ) ವಿವರಿಸಿದ್ದರು.

ತದನಂತರ 1,260 ಎಕರೆ ಕೃಷಿ ಭೂಮಿ ಭೂಸ್ವಾಧೀನಪಡಿಸಿ ಹೊರಡಿಸಿದ್ದ ಅಧಿಸೂಚನೆ  ರದ್ದುಪಡಿಸಿದರು. ಅನೇಕಲ್ ತಾಲೂಕಿನಲ್ಲಿ ಇನ್ನು ಮುಂದೆ ಯಾವುದೇ ಭೂಮಿ ಕೈಗಾರಿಕಾ ಸ್ಥಾಪನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳಬಾರದೆಂದು, ರಾಮೇಶ್ವರ್ ಠಾಕೂರ್ ರವರಿಂದ‌ ‌ಸರ್ಕಾರಕ್ಕೆ ಪತ್ರ ಬರೆಸಿಕೊಂಡು ಬಂದಿದ್ದರು. ಇದು ರಾಮಲಿಂಗಾರೆಡ್ಡಿ ಅವರ ಜನಪರ‌ ಕಾಳಜಿ ಎಂದು ರೈತ ಹೋರಾಟಗಾರರು ಶ್ಲಾಘಿಸಿದ್ದಾರೆ.

ಆಗಸ್ಟ್ 13 ರಂದು ರೈತರು ಮಾಡಿದ್ದ ಮನವಿಯಂತೆ ಕೈಗಾರಿಕಾ ಸಚಿವರ ಜತೆ ಸಭೆ ನಿಗದಿ ಮಾಡಿರುತ್ತೇನೆ ಎಂದು ಇಂದು ಸಚಿವರು ತಿಳಿಸಿರುತ್ತಾರೆ. ಎಲ್ಲ ರೈತರ ಹಾಗೂ ಸಮಿತಿ ಪರವಾಗಿ ರಾಮಲಿಂಗಾರೆಡ್ಡಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಆನೇಕಲ್ ಭೂ ಸ್ವಾಧೀನ ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ಸಿ.ಜಯಪ್ರಕಾಶ್ ತಿಳಿಸಿದ್ದಾರೆ.


Share It

You cannot copy content of this page