ರಾಜಕೀಯ ಸುದ್ದಿ

ಪ್ರತಿಯೊಂದಕ್ಕೂ ಸಮಯವೇ ಉತ್ತರಿಸುತ್ತದೆ: ಡಿಸಿಎಂ ಡಿ.ಕೆ. ಶಿವಕುಮಾರ್

Share It

ನವದೆಹಲಿ: “ಕಾಲವೇ ಉತ್ತರ ನೀಡುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸಮಯವೇ ಪ್ರತಿಯೊಂದಕ್ಕೂ ಉತ್ತರಿಸುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಶಿವಕುಮಾರ್ ಅವರು ಭಾನುವಾರ ಉತ್ತರಿಸಿದರು. ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೀರಿ ಎಂದು ಕೇಳಿದಾಗ, “ನಾನು ಅದನ್ನು ಏಕೆ ಬಹಿರಂಗಗೊಳಿಸಬೇಕು. ನಾವು ಇಲ್ಲಿಗೆ ಬರುವುದೇ ಸರ್ಕಾರದ ಕೆಲಸಕ್ಕೆ ಪಕ್ಷದ ಕೆಲಸಕ್ಕೆ, ನಮ್ಮ ರಾಜಕೀಯಕ್ಕೆ” ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಇದ್ದಾರೆ ಎಂದರೆ ಹೈಕಮಾಂಡ್ ಭೇಟಿ ಚರ್ಚೆ ರಾಜ್ಯದಲ್ಲಿ ನಡೆಯುತ್ತಿದೆ ಎನ್ನುವ ಬಗ್ಗೆ ಕೇಳಿದಾಗ, “ನಾವು ರಾಜಕಾರಣಿಗಳು. ರಾಜಕಾರಣಿಗಳು ಏನು ರಾಜಕಾರಣ ಮಾಡಬೇಕೋ ಅದನ್ನು ಎಲ್ಲಾ ರಾಜಕಾರಣಿಗಳು ಮಾಡುತ್ತಾರೆ. ಇದರಲ್ಲಿ ಏನೂ ತಪ್ಪಿಲ್ಲ. ನಾವುಗಳು ನಮ್ಮ ಅನುಕೂಲಕ್ಕೆ ಯಾರನ್ನು ಭೇಟಿ ಮಾಡುಬೇಕೋ ಅವರನ್ನು ಕೇಳಿರುತ್ತೇವೆ, ಭೇಟಿ ಮಾಡುತ್ತೇವೆ. ನೀವು (ಮಾಧ್ಯಮಗಳು) ಏಕೆ ಇದನ್ನು ದೊಡ್ಡದು ಮಾಡುತ್ತೀರಿ” ಎಂದರು.

ನರೇಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿ ಕ್ಷೇತ್ರದಲ್ಲಿ ಐದು ಕಿ.ಮೀ. ಪಾದಯಾತ್ರೆ: ನರೇಗಾ ವಿಚಾರವಾಗಿ ನಡೆದ ಸಭೆಯ ಬಗ್ಗೆ ಕೇಳಿದಾಗ, “ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಪ್ರತಿ ಕ್ಷೇತ್ರದಲ್ಲಿಯೂ ಐದು ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಪಂಚಾಯತಿ ಮಟ್ಟದಲ್ಲಿ ರೆಸಲ್ಯೂಷನ್ ಹೊರಡಿಸಲಾಗುವುದು. ಸಭೆ ನಡೆಸಲಾಗುವುದು” ಎಂದು ತಿಳಿಸಿದರು.

“ಎಲ್ಲಾ ಪಿಸಿಸಿ ಅಧ್ಯಕ್ಷರುಗಳ ಸಭೆ ಕರೆಯಲಾಗಿತ್ತು. ನಾನು ಸಹ ಸಭೆಯಲ್ಲಿ ಪಾಲ್ಗೊಂಡಿದ್ದೆ. ಸಚಿವರಾದ ಪ್ರಿಯಾಂಕ್ ಖರ್ಗೆ ಅವರೂ ಭಾಗವಹಿಸಿದ್ದರು. ಪಾದಯಾತ್ರೆ ವಿಚಾರ ಹಾಗೂ ಹೋರಾಟ ಮಾದರಿ ಬಗ್ಗೆ ಈ ಮೊದಲೇ ತಿಳಿಸಲಾಗಿತ್ತು. ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಸಭೆಯಲ್ಲಿ ನೀಡಿದ ಆದೇಶಗಳನ್ನು ಜಾರಿಗೊಳಿಸಲಾಗುವುದು” ಎಂದು ತಿಳಿಸಿದರು.

“ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ನಾವು ಹೋರಾಟ ಮಾಡುತ್ತೇವೆ. ಈಗಾಗಲೇ ಪಂಚಾಯತಿ ಸದಸ್ಯರುಗಳ ಸಭೆ ನಡೆಸಲಾಗಿದೆ. ಶಾಸಕರ, ವಿಧಾನಪರಿಷತ್ ಸದಸ್ಯರ, ಪಕ್ಷದ ಪದಾಧಿಕಾರಿಗಳ, ಸಂಸದರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಲಾಗಿದೆ. ಸಂಘಟನಾ ಕಾರ್ಯದರ್ಶಿಯವರು, ಉಸ್ತುವಾರಿಗಳು ರಾಜ್ಯಕ್ಕೆ ಭೇಟಿ ನೀಡುವ ಸೂಚನೆ ನೀಡಿದ್ದಾರೆ” ಎಂದರು.


Share It

You cannot copy content of this page