ಸಿರಿಗೇರಿ ಗ್ರಾಮದ ಸಂಶೋಧನಾರ್ಥಿ ಈಶ್ವರ್ ರವರಿಗೆ ಪಿಎಚ್.ಡಿ ಪದವಿ ಪ್ರದಾನ
ಬೆಂಗಳೂರು : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ನಿವಾಸಿ ದಿವಂಗತ ಸಿ. ತಿಪ್ಪಣ್ಣ ಮತ್ತು ದಿವಂಗತ ಶ್ರೀಮತಿ ಸಿ. ಹುಲಿಗೇಮ್ಮ ದಂಪತಿಯ ಹಿರಿಯ ಪುತ್ರ, ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಈಶ್ವರ್ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕನ್ನಡ ಚಿತ್ರರಂಗಕ್ಕೆ ಹಂಸಲೇಖ ರವರ ಕೊಡುಗೆ: ಒಂದು ಅಧ್ಯಯನ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಹಿನ್ನೆಲೆ: ಈಶ್ವರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ 5ನೇ ರ್ಯಾಂಕ್ ನೊಂದಿಗೆ, ಇದೇ ವಿಷಯದಲ್ಲಿ ಸಂಶೋಧನೆಯನ್ನು ಮಾಡಿದ ವಿಶೇಷ, ನಂತರದಲ್ಲಿ ರಾಜ್ಯದ ಪ್ರತಿಷ್ಠಿತ ವಿವಿಧ ದಿನಪತ್ರಿಕೆಗಳ ಮಾಧ್ಯಮಗಳಲ್ಲಿ ಮತ್ತು ಕೆಲ ಡಿಜಿಟಲ್ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ಇವರ ಶೈಕ್ಷಣಿಕ ಸಾಧನೆಗಾಗಿ ಈಶ್ವರ್ ಅವರಿಗೆ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಹಾಗೂ ಸಿರಿಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಶುಭ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಶೋಧನಾ ಮಹಾಪ್ರಬಂಧವು ಕನ್ನಡ ಚಿತ್ರರಂಗದಲ್ಲಿ ಇದೊಂದು ಹೊಸ ಮೈಲುಗಲ್ಲು ಮತ್ತು ವಿಶಿಷ್ಟ ದಾಖಲೆಯಾಗಿದೆ. ಸಿನಿಮಾ ರಂಗದ ಹಲವಾರು ಪರಿಣಿತರು, ಸಿನಿಮಾ ಪತ್ರಕರ್ತರು, ಸಿನಿಮಾ ಕಲಾವಿದರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಸೇರಿದಂತೆ ಕನ್ನಡ ಸಿನಿಮಾದ ವಿವಿಧ ಸಂಘಗಳು, ಹಂಸಲೇಖ ರವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಸಮಗ್ರವಾಗಿ ಸಂಶೋಧನೆ ನಡೆಸಿರುವ ಮಹಾಪ್ರಬಂಧದ ಕುರಿತು ಹರ್ಷ ವ್ಯಕ್ತಪಡಿಸಿ ಪ್ರಶಂಸಿದ್ದಾರೆ.

