ಮಂಗಳೂರು: ಚಾಲಕನ ಅಜಾಗರೂಕತೆಯಿಂದ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಚಾಲಕನ ಅಜಾಗರೂಕತೆಗೆ ಶಿಸ್ತು ಕ್ರಮ ತೆಗೆದುಕೊಳ್ಳಲು ವ್ಯವಸ್ಥಾಪಕ ನಿರ್ದೇಶಕರ ಅಕ್ರಂ ಪಾಷ ಆದೇಶ ಮಾಡಿದ್ದಾರೆ.
ಬೆಳಗ್ಗೆ ಮಂಗಳೂರು ವಿಭಾಗದ ಮಂಗಳೂರು-1ನೇ ಘಟಕದ ವಾಹನಸಂಖ್ಯೆ : KA19F3407 ಮಾರ್ಗಸಂಖ್ಯೆ : 129/130 ಕಾಸರಗೋಡು – ಮಂಗಳೂರು ಮಾರ್ಗದಲ್ಲಿ ಚಾಲಕ ನಿಜಲಿಂಗಪ್ಪ ಚಲವಾದಿ ಬಿ.ಸಂ: 309 ರವರು ಕರ್ತವ್ಯ ನಿರ್ವಹಿಸುವಾಗ ಸಮಯ ಸುಮಾರು 1230 – 1235ರ ಸಮಯದಲ್ಲಿ ಕಾಸರಗೋಡುನಿಂದ ನಿರ್ಗಮಿಸಿ ಸಮಯ 13:45 ಕ್ಕೆ ತಲಪಾಡಿ ಟೋಲ್ ಗಿಂತ 150 ಮೀಟರ್ ಹಿಂದಕ್ಕೆ ನಿಗಮದ ಚಾಲಕರು ತಮ್ಮ ವಾಹನವನ್ನು ಅತೀವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ರಸ್ತೆಗೆ ಅಡ್ಡ ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ ಹಾಕಿದ್ದು, ಅಷ್ಟರಲ್ಲಿ ನಿಗಮದ ವಾಹನ ಆಟೋಗೆ ಮಾರಣಾಂತಿಕ ಡಿಕ್ಕಿಯಾಗಿದ್ದು, ಆ ಸಂದರ್ಭದಲ್ಲಿ ನಿಗಮದ ವಾಹನವು ಡಿಕ್ಕಿಯಾಗಿ ಹಠಾತ್ತನೆ ಸ್ಜೀಡ್ ಆಗಿ ತಿರುಗಿ ನಿಂತಿದ್ದು, ಚಾಲಕರು ಚಾಲನಾ ಸೀಟಿನಿಂದ ಓಡಿ ಹೋಗಿದ್ದು, ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿಯಾಗಿ ನಿಂತಿರುತ್ತದೆ.
ಸದರಿ ಅಪಘಾತದಲ್ಲಿ ಮುಂದಿನಿಂದ ಡಿಕ್ಕಿಹೊಡೆದ ಅಟೋದಲ್ಲಿ 2 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಹಿಂಬದಿಯಿಂದ ಡಿಕ್ಕಿಯಾಗಿದ್ದ 2 ಜನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.
ಈ ವಾಹನವನ್ನು ದಿನಾಂಕ : 27.8.2025 ರಂದು ಮಾರ್ಗಸಂಖ್ಯೆಗೆ ನಿಯೋಜಿಸಿದ್ದು ಅಪಘಾತ ಸಮಯದವರೆಗೆ 10 ಸುತ್ತುವಳಿಯಲ್ಲಿ ಒಟ್ಟಾರೆ 540ಕಿಮೀ ಕ್ರಮಿಸಿರುತ್ತದೆ. ಅಲ್ಲದೇ ಈ ವಾಹನವು ದಿನಾಂಕ: 26.08.2025 ರಂದು FC ನವೀಕರಣ ಆಗಿ ಬಂದಿದ್ದು, ಯಾವುದೇ ತಾಂತ್ರಿಕ ದೋಷದಿಂದ ಸಂಭವಿಸಲು ಸಾಧ್ಯವಿರುವುದಿಲ್ಲ.
ಅಲ್ಲದೇ ನಿಜಲಿಂಗಪ್ಪ ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಮಾರ್ಗದಲ್ಲಿಯೇ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಚಾಲಕರ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ. ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ನಿಗಮವು ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಪಘಾತ ತಪ್ಪಿಸಲು ನಿರಂತರ ತರಬೇತಿ, ತಿಳುವಳಿಕೆ ಮತ್ತು ಜಾಗೃತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ್ಯೂ ಸಹ, ಈ ರೀತಿಯ ಅಪಘಾತಗಳು ಸಂಭವಿಸಿರುವುದು ಅತ್ಯಂತ ದುಃಖಕರ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕಲ್ಪಿಸಲಿ ಎಂದು ಕೋರುತ್ತಾ, ತಪ್ಪಿತಸ್ಥ ಚಾಲಕನ ಮೇಲೆ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

