ನವದೆಹಲಿ: ಹತ್ತು ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಶವವಾಗಿ ಪತ್ತೆಯಾಗಿರುವ ಘಟನೆ ರೋಹ್ಟಕ್ ನಲ್ಲಿ ನಡೆದಿದೆ.
ನವದೆಹಲಿಯ ಶಾಕರ್ ಪುರ ಪ್ರದೇಶದಿಂದ ಹತ್ತು ತಿಂಗಳ ಹಿಂದೆ 17 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಇದೀಗ ಆಕೆಯ ಮೃತದೇಹ ಹರಿಯಾಣದ ರೋಹ್ಟಕ್ ನ ಆಸ್ಪತ್ರೆಯ ಸಮೀಪ ಪತ್ತೆಯಾಗಿದೆ. ಪ್ರಕರಣ ಸಂಬಂಧ ಆಕೆಯ ಜತೆಗೆ ಲಿವಿಂಗ್ ಸಂಬಂಧ ಹೊಂದಿದ್ದ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
2024 ರ ಜುಲೈ 7 ರಂದು ಬಾಲಕಿ ನಾಪತ್ತೆಯಾಗಿದ್ದು, ಆಕೆಯನ್ನು ಹುಡುಕಾಡಿದ ಪೋಷಕರು ಸುಭಾಷ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಏ.24 ರಂದು ರೋಹ್ಟಕ್ ನಲ್ಲಿ ಅಪರಿಚಿತ ಅಪ್ರಾಪ್ತೆಯ ಶವ ಪತ್ತೆಯಾದ ಕಾರಣ, ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಸುಭಾಷ್ ಪ್ಲೇಸ್ ಠಾಣೆಯಲ್ಲಿ ದಾಖಲಾಗಿರುವ ಅಪಹರಣ ಪ್ರಕರಣದ ಜತೆಗೆ ಸಾಮ್ಯತೆ ಕಂಡು ಬಂದ ಕಾರಣಕ್ಕೆ ಶವವನ್ನು ಪೊಷಕರಿಗೆ ಹಸ್ತಾಂತರ ಮಾಡಲಾಗಿದೆ.
ಆಕೆಯನ್ನು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಸೇರಿಸಿದ್ದು, ಆಕೆ ಅವಧಿಪೂರ್ವ ಮಗುವಿಗೆ ಜನ್ಮನೀಡಿದ್ದಳು. ಅನಂತರ ಆಕೆಯೂ ಪ್ರಾಣಬಿಟ್ಟಿದ್ದಳು. ಎರಡು ಶವಗಳನ್ನು ಆ ವ್ಯಕ್ತಿಗೆ ಹಸ್ತಾಂತರಿಸಲಾಗಿತ್ತು. ಮಗುವಿನ ಸಂಸ್ಕಾರ ನಡೆಸಿದ್ದ ಆ ವ್ಯಕ್ತಿ, ಬಾಲಕಿಯ ಸಂಸ್ಕಾರ ನಡೆಸಲು ಹಣ ಹೊಂದಿಸಲು ಸಾಧ್ಯವಾಗದೆ ಆಸ್ಪತ್ರೆ ಬಳಿ ತಂದು ಬಿಸಾಕಿದ್ದ ಎಂದು ಮೂಲಗಳು ತಿಳಿಸಿವೆ.
ಆತನನ್ನು ಹರಿದ್ವಾರದಲ್ಲಿ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಆತ ಆಕೆಯ ಶವ ಸಂಸ್ಕಾರಕ್ಕೆ 15 ರಿಂದ 20 ಸಾವಿರ ಹಣ ಕೇಳಿದ್ದ ಕಾರಣಕ್ಕೆ ಶವವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಗಿ ಹೇಳಿದ್ದಾನೆ. ಪೊಲೀಸರು ಅಪಹರಣ ಮತ್ತು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.