ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಪ್ರಕರಣ: ಸೆ.2 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ಸುಧೀರ್ಘ ವಾಗಿ ನಡೆದು, ವಿಚಾರಣೆಯನ್ನು ಸೆ.2 ಕ್ಕೆ ಮುಂದೂಡಲಾಗಿದೆ.
ಬೆಳಗ್ಗೆ 10.30 ಕ್ಕೆ ಆರಂಭವಾದ ಅರ್ಜಿ ವಿಚಾರಣೆ ಸತತ ಆರು ಗಂಟೆಗಳ ಕಾಲ ನಡೆಯಿತು. ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡನೆ ಮಾಡಿದರು.
ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವ ವೇಳೆ ಸಚಿವ ಸಂಪುಟದ ಅನುಮತಿ ಕೇಳಿಲ್ಲ, ಯಾವುದೇ ತನಿಖಾ ಪ್ರಾಧಿಕಾರದ ಮನವಿ ಇಲ್ಲದೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ವಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ, ರಾಜ್ಯಪಾಲರ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಚಿವರು ಸಿಎಂ ಅವರಿಂದ ನೇಮಕವಾಗಿರುತ್ತಾರೆ. ಸಿಎಂ ವಿರುದ್ಧದ ತನಿಖೆಗೆ ಅವರ ಕೆಳಗಿನ ಸಚಿವರ ಅನುಮತಿ ಕೇಳುವುದು ಅಷ್ಟೊಂದು ಸರಿಯಲ್ಲ. ಹೀಗಾಗಿ, ರಾಜ್ಯಪಾಲರ ನಡೆ ಸರಿಯಾಗಿದೆ ಎಂದು ವಾದಿಸಿದರು.
ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಮುಂದಿನ ವಿಚಾರಣೆಯನ್ನು ಸೆ. 2 ಕ್ಕೆ ಮುಂದೂಡಿದರು. ಇಂದಿನ ವಿಚಾರಣೆಯಲ್ಲಿ ದೂರುದಾರರ ಪರ ವಕೀಲರು ಸಹ ವಾದ ಮಂಡನೆ ಮಾಡಿದರು.