ಕೊಪ್ಪಳ: ಕೊಪ್ಪಳ ನಗರಸಭೆ ಕಚೇರಿ ಸೇರಿ 5 ಕಡೆ ಮಂಗಳವಾರ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದಲ್ಲಿ, ನಗರಸಭೆ ಜಿಇ ಸೋಮಲಿಂಗಪ್ಪ, ಕಂದಾಯ ಅಧಿಕಾರ ಉಜ್ಚಲ, ಗುತ್ತಿಗೆದಾರರಾದ ಶಕೀಲ ಪಟೇಲ್ (ನಗರಸಭೆ ಅಧ್ಯಕ್ಷನ ಸಹೋದರ), ಪ್ರವೀಣ ಕಂದಾರಿ ಮನೆಯ ಮೇಲೆ ಕೂಡ ದಾಳಿ ನಡೆದಿದೆ.
2023-24ನೆಯ ಸಾಲಿನ ನಗರಸಭೆಯ ಅನುದಾನದಲ್ಲಿ ದುರ್ಬಳಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ. 336 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂಪಾಯಿ ದುರ್ಬಳಕೆ ಮಾಡಿರುವ ಆರೋಪ ವ್ಯಕ್ತವಾಗಿತ್ತು. ಅರ್ಧಂಬರ್ಧ ಕಾಮಗಾರಿ, ಕೆಲ ಕಡೆ ಕಾಮಗಾರಿ ಮಾಡದೆ ಹಣ ಬಳಸಿರುವ ಆರೋಪ ಕೇಳಿಬಂದಿತ್ತು.
ಅನುದಾನ ದುರ್ಬಳಕೆ ಆರೋಪ: ಕೊಪ್ಪಳ ನಗರಸಭೆಯಲ್ಲಿ ಆಡಳಿತಾತ್ಮಕ ಭ್ರಷ್ಟಾಚಾರದ ಆರೋಪಗಳು ಹಿಂದಿನಿಂದಲೂ ಕೇಳಿಬಂದಿದ್ದವು. ೨೦೨೩-೨೪ರಲ್ಲಿ ನಗರದ ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನವನ್ನು ಸರಿಯಾಗಿ ಬಳಕೆ ಮಾಡದಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಕಾಮಗಾರಿಗಳ ಗುಣಮಟ್ಟ, ಪೂರ್ಣಗೊಳ್ಳದ ಯೋಜನೆಗಳು ಮತ್ತು ಹಣದ ದುರುಪಯೋಗದ ಆರೋಪಗಳು ಲೋಕಾಯುಕ್ತದ ಗಮನಕ್ಕೆ ಬಂದವು. ಈ ಆರೋಪಗಳನ್ನು ಆಧರಿಸಿ, ಲೋಕಾಯುಕ್ತ ಡಿವೈ ಎಸ್ಪಿ ವಸಂತಕುಮಾರ್ ಅವರ ನೇತೃತ್ವದಲ್ಲಿ ದಾಳಿಯನ್ನು ಯೋಜಿಸಲಾಯಿತು. ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.