ಉಪಯುಕ್ತ ರಾಜಕೀಯ ಸುದ್ದಿ

ಹಿಂದೂ ದೇವಾಲಯಗಳ ಆಸ್ತಿಗೆ ಸರಕಾರದ ಶ್ರಿ ರಕ್ಷೆ: ಸಚಿವ ರಾಮಲಿಂಗಾ ರೆಡ್ಡಿ ಬದ್ಧತೆಯಿಂದ ಉಳಿಯಿತು 10,700 ಎಕರೆ ‘ದೇವರ ಆಸ್ತಿ’

Share It

ಒಂದು ವರ್ಷದಲ್ಲಿ 5022 ದೇವಾಲಯಗಳ ಆಸ್ತಿಗಳಿಗೆ ದಾಖಲೆ ಒದಗಿಸಿದ ಕಂದಾಯ ಇಲಾಖೆ
ಬೆಂಗಳೂರು: ಸದಾ ದೇವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಮಾಡದ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿ ತೋರಿಸಿದೆ.

ರಾಜ್ಯದ ಮುಜರಾಯಿ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಜಮೀನು ಅನ್ಯರ ಪಾಲಾಗಿತ್ತು. ಕೆಲ ಸಂಸ್ಥೆಗಳು, ಟ್ರಸ್ಟ್ ಗಳು ಹಾಗೂ ಖಾಸಗಿ ವ್ಯಕ್ತಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಹಿಂದಿನ ಬಿಜೆಪಿ ಸರಕಾರ ತೆರವು ಮಾಡುವ ಕಡೆ ಯಾವುದೇ ಒಲವು ತೋರಲಿಲ್ಲ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಖಾತೆಯನ್ನು ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಅವರ ಬದ್ಧತೆಯಿಂದ ಈವರೆಗೆ ರಾಜ್ಯದ ವಿವಿಧ ದೇವಸ್ಥಾನಗಳ 10,700 ಎಕರೆ ಜಮೀನನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 5022 ಆಸ್ತಿಗಳಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸೃಷ್ಟಿಸಿ, ದೇವಸ್ಥಾನಗಳ ಅಧೀನಕ್ಕೆ ನೀಡಲಾಗಿದೆ.

ಒತ್ತುವರಿ ತೆರವುಗೊಳಿಸಿದ ಮುಜರಾಯಿ ಇಲಾಖೆ: ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ 34,564 ದೇವಸ್ಥಾನಗಳ ಪೈಕಿ ಬಹುತೇಕ ದೇವಸ್ಥಾನಗಳಿಗೆ ಸರಕಾರ ಮತ್ತು ದಾನಿಗಳು ನೀಡಿದ ಆಸ್ತಿಯಿದೆ. ಆದರೆ, ಬಹುತೇಕ ದೇವಸ್ಥಾನಗಳ ಆಸ್ತಿ ಖಾಸಗಿ ಪಾಲಾಗಿತ್ತು. ಇದೀಗ ಸರ್ವೆ ನಡೆಸಿ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ.

ಭೂ ದಾಖಲೆ ನೀಡಿದ ಕಂದಾಯ ಇಲಾಖೆ: ರಾಜ್ಯದಲ್ಲಿ 34,166 ಸಿ ದರ್ಜೆಯ ದೇವಸ್ಥಾನಗಳು, 193 ಬಿ ದರ್ಜೆಯ ದೇವಸ್ಥಾನ ಹಾಗೂ 205 ‘ಎ’ ದರ್ಜೆಯ ದೇವಸ್ಥಾನಗಳಿವೆ. ಈ ದೇವಸ್ಥಾನಗಳಿಗೆ ಸರಕಾರದಿಂದ ಹಾಗೂ ದಾನಿಗಳಿಂದ ದಾನದ ರೂಪದಲ್ಲಿ ಬಂದ ಸಾವಿರಾರು ಎಕರೆ ಆಸ್ತಿಯಿದೆ. ಆದರೆ, ಈವರೆಗೆ ಆ ಆಸ್ತಿಗಳಿಗೆ ಸೂಕ್ತ ದಾಖಲೆಗಳಿರಲಿಲ್ಲ. ಇದೀಗ ಕಂದಾಯ ಇಲಾಖೆ ಎಲ್ಲ ಆಸ್ತಿಗಳಿಗೆ ದಾಖಲೆ ಒದಗಿಸುವ ಕೆಲಸ ಮಾಡಿದೆ.

ಈ ಕುರಿತು ಮಾರನಾಡಿರುವ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿ ಯಾವಾಗಲೂ ದೇವರು ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತದೆ. ಆದರೆ, ದೇವಸ್ಥಾನಗಳು ಮತ್ತು ದೇವಸ್ಥಾನಕ್ಕೆ ಸಂಬಂಧಿಸಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ನಮ್ಮ ಸರಕಾರ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ದೇವಸ್ಥಾನಗಳಿಗೆ ಮರಳಿ ಕೊಡಿಸಲಾಗಿದೆ‌. ದಾಖಲೆಗಳು ಇಲ್ಲದೇ ಇದ್ದ ಜಮೀನುಗಳಿಗೆ ಸೂಕ್ತ ದಾಖಲೆ ಸೃಷ್ಟಿಸಿಕೊಡುವಲ್ಲಿ ಕಂದಾಯ ಇಲಾಖೆ ಯಶಸ್ವಿಯಾಗಿದೆ‌.

ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಂಡ ಪರಿಣಾಮ ವರ್ಷದಲ್ಲಿ 5022 ಆಸ್ತಿಗಳನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸೂಕ್ತ ದಾಖಲೆ ಒದಗಿಸಿದ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇಲಾಖೆ ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ವತಿಯಿಂದ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ನಮ್ಮ ಸರಕಾರದ ಅವಧಿಯಲ್ಲಿ ದೇವಸ್ಥಾನಗಳಿಗೆ ಸೇರಿದ 5022 ಆಸ್ತಿಗಳನ್ನು ರಕ್ಷಣೆ ಮಾಡಿದ್ದೇವೆ. ಕಂದಾಯ ಇಲಾಖೆ‌ ಸೂಕ್ತ ದಾಖಲೆಗಳನ್ನು ಒದಗಿಸಿದೆ. ಈ ಮೂಲಕ ಕಂದಾಯ ಸಚಿವರಿಗೆ ಧನ್ಯವಾದ ತಿಳಿಸಿದ್ದೇನೆ.

  • ರಾಮಲಿಂಗಾ ರೆಡ್ಡಿ,
  • ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರು

Share It

You cannot copy content of this page