ಸರಕಾರದಿಂದ ಕೌಶಲ್ಯ ರಥ ಕಾರ್ಯಕ್ರಮ ಆಯೋಜನೆ: ನಿರುದ್ಯೋಗಿಗಳ ಪಾಲಿಗಿದು ಆಶಾಕಿರಣ
ಬೆಳಗಾವಿ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಕೌಶಲ್ಯ ರಥ ಕಾರ್ಯಕ್ರಮವನ್ನು ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿರುತ್ತದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿಗೆ ತಾಲ್ಲೂಕು ಹಾಗೂ ಅತಿ ಹಿಂದುಳಿದ ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಪಡೆಯಲು ಪೂರಕವಾಗುವಂತೆ ಅವರಿರುವ ಸ್ಥಳಕ್ಕೆ ತೆರಳಿ ತರಬೇತಿ ನೀಡುವ ಸಂಬಂಧ ಸ್ಕಿಲ್ಸ್ ಆನ್ ವೀಲ್ಸ್ (ಕೌಶಲ್ಯ ರಥ / ನೈಪುಣ್ಯ ರಥ) ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎಂದರು.
ರಾಜ್ಯದ ಗ್ರಾಮೀಣ ಯುವಜನರಿಗೆ ಅಲ್ಪಾವಧಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದರು.
2022-23ನೇ ಸಾಲಿನಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ತಲಾ 75 ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಅಸಿಸ್ಟಂಟ್ ಬ್ಯೂಟಿ ಥೆರಪಿಸ್ಟ್ ಅಂಡ್ ಅಸಿಸ್ಟಂಟ್ ಎಲೆಕ್ಟ್ರಿಷಿಯನ್ ಜಾಬ್ ರೋಲ್ ನಡಿ ಹಾಗೂ 2023-24ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ಅಭ್ಯರ್ಥಿಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 60 ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಅಸಿಸ್ಟಂಟ್ ಎಲೆಕ್ಟ್ರಿಷಿಯನ್ ಅಂಡ್ ಅಸಿಸ್ಟಂಟ್ ಬ್ಯೂಟಿ ಥೆರಪಿಸ್ಟ್ ಜಾಬ್ ರೋಲ್‌ನಡಿ ತರಬೇತಿಯನ್ನು ನೀಡಲಾಗಿದೆ ಎಂದರು.


