ಶಬರಿಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಉದ್ಯಮಿ ಸೇರಿ ಇಬ್ಬರ ಬಂಧನ
ಬಳ್ಳಾರಿ : ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಚಿನ್ನ ಕಳವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ ಬಳ್ಳಾರಿಯ ಚಿನ್ನದ ಉದ್ಯಮಿ ಸೇರಿ ಇಬ್ಬರನ್ನು ಬಂಧಿಸಿದೆ.
ಶಬರಿಮಲೆ ದೇಗುಲದಲ್ಲಿ ಕಲಾಕೃತಿಗಳಿಗೆ ವಿದ್ಯುತ್ ಲೇಪನ ಮಾಡಿದ್ದ ‘ಸ್ಮಾರ್ಟ್ ಕ್ರಿಯೇಷನ್ಸ್’ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿ ಚಿನ್ನದ ಉದ್ಯಮಿ ಗೋವರ್ಧನ್ ಬಂಧಿತ ಆರೋಪಿಗಳು. ಇವರಿಬ್ಬರನ್ನು ವಶಕ್ಕೆ ಪಡೆದು ತಿರುವನಂತಪುರದಲ್ಲಿರುವ ಅಪರಾಧ ವಿಭಾಗದ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿ, ಬಳಿಕ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಪ್ರಕರಣ ಸಂಬಂಧ ಕೇರಳದ ಟಿಡಿಬಿ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಬಂಧಿಸಲಾಗಿತ್ತು. 2019ರಲ್ಲಿ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದ್ವಾರಪಾಲಕರ ಮೂರ್ತಿಗಳು ಹಾಗೂ ಗರ್ಭಗುಡಿಯ ದ್ವಾರಕ್ಕೆ ವಿದ್ಯುತ್ ಲೇಪನಕ್ಕಾಗಿ ಸ್ಮಾರ್ಟ್ ಕ್ರಿಯೇಷನ್‌ಗೆ ತೆಗೆದಕೊಂಡು ಹೋಗಿದ್ದ. ಆ ವೇಳೆ ಅದರಲ್ಲಿದ್ದ ಚಿನ್ನ ತೆಗೆಯಲಾಗಿದೆ ಎನ್ನುವುದು ಎಸ್‌ಐಟಿ ತನಿಖೆಯಲ್ಲಿ ಗೊತ್ತಾಗಿದೆ. ವಿದ್ಯುತ್ ಲೇಪನದ ವೇಳೆ 400 ಗ್ರಾಂಗೂ ಅಧಿಕ ಚಿನ್ನ ತೆಗೆದು ಅದನ್ನು ಗೋವರ್ಧನ್ಗೆ ಹಸ್ತಾಂತರಿಸಲಾಗಿದೆ ಎಂದು ಪೊಟ್ಟಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದ್ವಾರಪಾಲಕ ಮೂರ್ತಿಗಳ ಚಿನ್ನಗಳವು ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ಪ್ರಕರಣದದಲ್ಲಿ ಪಂಕಜ್ ಭಂಡಾರಿ ಹಾಗೂ ಗೋವರ್ಧನ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ, ಹೆಚ್ಚಿನ ಸಾಕ್ಷಿಗಳು ಪತ್ತೆಯಾಗಿದ್ದವು. ಈಗಾಗಲೇ ಎಸ್‌ಐಟಿ ಗೋವರ್ಧನ್ ಚಿನ್ನದ ಅಂಗಡಿಯಿಂದ 400 ಗ್ರಾಂ ಚಿನ್ನ ವಶಪಡಿಸಿಕೊಂಡಿದೆ. ಭಂಡಾರಿ ಹಾಗೂ ಗೋವರ್ಧನ ಪ್ರಕರಣದಲ್ಲಿ ಬಂಧಿತರಾದ 8 ಹಾಗೂ 9ನೇ ಆರೋಪಿಗಳಾಗಿದ್ದಾರೆ. ಬಂಧಿತರನ್ನು ಕೋಲಂನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತನಿಖೆ ಪ್ರಕಾರ, 2019ರಲ್ಲಿ ದ್ವಾರಪಾಲಕ ವಿಗ್ರಹಗಳ ಚಿನ್ನದ ಲೇಪಿತ ಫಲಕಗಳನ್ನು ಎಲೆಕ್ಟ್ರೋಪ್ಲೇಟಿಂಗ್‌ಗಾಗಿ ಪೋಟಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯಿಂದ ಪಡೆದುಕೊಂಡಿದ್ದರು. ಬಳಿಕ ಅನಧಿಕೃತವಾಗಿ ಉನ್ನಿಕೃಷ್ಣನ್ ಪೊಟ್ಟಿ ಅವುಗಳನ್ನು ದಕ್ಷಿಣ ಭಾರತದ ರಾಜ್ಯಗಳ ವಿವಿಧ ದೇವಾಲಯಗಳು ಮತ್ತು ಮನೆಗಳಿಗೆ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ.


