ರೈತ ಸಂತೆಯಲ್ಲಿ ಕೃಷಿ ಉತ್ಪನ್ನಗಳಿಗೆ ಮನಸೋತ ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರೈತ ಸಂತೆಯಲ್ಲಿ ಮಿಲ್ಕಿ ಮಶ್ರೂಮ್, ಬೇಲದ ಹಣ್ಣು, ತುಪ್ಪ, ಅವರೇಕಾಯಿ ತಿನಿಸು, ಅವರೆಕಾಯಿ ಬಿಡಿಸುವ ಯಂತ್ರ, ನಾಟಿ ಬೆಲ್ಲ, ಸೀಬೆ ಹಣ್ಣುಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನಸೋತರು.
ರೈತ ಸಂತೆ ಕಾರ್ಯಕ್ರಮದಲ್ಲಿ ರೈತರ ಉತ್ಪನ್ನಗಳ ಮಾರಾಟ ಮಳಿಗೆಗಳಿಗೆ ಖುದ್ದಾಗಿ ಭೇಟಿ ನೀಡಿದ ಶಿವಕುಮಾರ್ ಅವರು ರೈತರೊಂದಿಗೆ ಮಾತುಕತೆ ನಡೆಸಿದರು. ಅವರ ಉತ್ಪನ್ನಗಳ ಮಾಹಿತಿ ಪಡೆದರು. ನಾಟಿ ಬೆಲ್ಲ ಸೇರಿದಂತೆ ಕೆಲವು ತಿನಿಸುಗಳನ್ನು ಸವಿದರು. ಖರೀದಿ ಮಾಡಿದರು.

ರೈತರೊಬ್ಬರು ಬೇಲ್ದಣ್ಣಿನ ಜ್ಯೂಸ್ ಮಾಡಿ ತಂದು ಕೊಟ್ಟಾಗ, ಸಂತೋಷಗೊಂಡ ಶಿವಕುಮಾರ್ ಅವರು, “ಬೇಲ್ದಣ್ಣು ಎಂದರೆ ನನಗೆ ಪಂಚಪ್ರಾಣ. ಬೇಲದ ಹಣ್ಣುಗಳನ್ನು ನಮ್ಮ ಮನೆಗೂ ಕಳುಹಿಸಿಕೊಡಿ, ಮನೆಯಲ್ಲಿ ಎಲ್ಲರೂ ಸವಿಯುತ್ತೇವೆ” ಎಂದು ಹೇಳಿದರು.
ಇನ್ನು ಕೃಷಿ ವಿವಿ ಅವರು ಕಂಡು ಹಿಡಿದಿರುವ ಅವರೆಕಾಯಿ ಬಿಡಿಸುವ ಯಂತ್ರವನ್ನು ಪರಿಶೀಲಿಸಿದ ಶಿವಕುಮಾರ್ ಅವರು ಅಲ್ಲೇ ನಿಂತು ಅವರೆಕಾಯಿ ಬಿಡಿಸುವ ಯಂತ್ರದ ಚಮತ್ಕಾರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ನಾಗಮಂಗಲ ತಾಲ್ಲೂಕಿನ ರೈತರು ಸೇರಿ ಸಾವಯವ ಪದ್ಧತಿ ಮೂಲಕ ಬೆಳೆದ ವಿವಿಧ ರೀತಿಯ ಅಣಬೆಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವುದನ್ನು ಪರಿಶೀಲಿಸಿದರು. ಮಿಲ್ಕಿ ಮಶ್ರೂಮ್, ಬಟನ್ ಮಶ್ರೂಮ್ ಹಾಗೂ ಆಯಿಸ್ಟರ್ ಮಶ್ರೂಮ್ ಗಳನ್ನು ಖರೀದಿ ಮಾಡಿದರು.
ಮತ್ತೊಬ್ಬರು ತಂದು ಕೊಟ್ಟ ನಾಟಿ ಹಸುವಿನ ತುಪ್ಪವನ್ನು ಬಹಳ ಸಂತೋಷದಿಂದ ಸ್ವೀಕರಿಸಿದರು. ಬೇಕಾದಾಗ ತರಿಸಿಕೊಳ್ಳುವುದಾಗಿ ಹೇಳಿ ಅವರ ಫೋನ್ ನಂಬರ್ ಕೂಡ ಪಡೆದರು.


