ಸಿಎಂ ಸಿದ್ದರಾಮಯ್ಯ ಕರ್ನಾಟಕದ ಅತಿಹೆಚ್ಚು ದಿನ ಆಳ್ವಿಕೆ ಮಾಡಿದ ಸಿಎಂಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ನೋಡನೋಡುತ್ತಿದ್ದಂತೆ ದೇವರಾಜ ಅರಸು ಅವರ ಹಾದಿಯನ್ನು ತಿಳಿದು ಅವರ ದಾಖಲೆಯನ್ನು ಮೀರಿ ನಿಂತಿದ್ದಾರೆ. ಇದಕ್ಕೊಂದು ಶುಭಾಶಯ ಹೇಳುತ್ತಲೇ ಅವರಿಗೊಂದಷ್ಟು ಕಿವಿಮಾತು ಹೇಳಲೇಬೇಕು.
ಸಿದ್ದರಾಮಯ್ಯ ಅವರೇ ಹೇಳಿವಂತೆ ದಾಖಲೆಗಳಿರುವುದೇ ಮುರಿಯಲು, ಸಿದ್ದರಾಮಯ್ಯ ಬೇರೆ ಅರಸು ಬೇರೆ, ಸಿದ್ದರಾಮಯ್ಯ ಎಂದೂ ಅರಸು ಅವರಂತಾಲಾರರು. ಹಾಗೆ ಆಗಲೂ ಬಾರದು. ಸಿದ್ದರಾಮಯ್ಯ ಸಿದ್ದರಾಮಯ್ಯ ಆಗಿಯೇ ಅಚ್ಚಳಿಯದೆ ಉಳಿಯಬೇಕು. ಅಂತಹದ್ದೊಂದು ಕ್ರಾಂತಿಯನ್ನು ಅವರ ಅಧಿಕಾರವಧಿಯಲ್ಲಿ ಮಾಡಬೇಕು. ಅದಕ್ಕಾಗಿ ಅವರು ಕೆಲವು ಗಟ್ಟಿತನ ತಾಳಲೇಬೇಕಿದೆ.
ಐದು ವರ್ಷ ಸಿಎಂ ಆಗಿ ಮುಂದುವರಿಯುತ್ತಾರಾ? ಸಿಎಂ ಸ್ಥಾನವನ್ನು ತ್ಯಜಿಸುತ್ತಾರಾ? ಹೈಕಮಾಂಡ್ ಜತೆ ಒಪ್ಪಂದವಾಗಿದೆಯಾ ಇದೆಲ್ಲವೂ ಅವರ ಪಕ್ಷದೊಳಗಿನ ವಿಚಾರ. ಆದರೆ, ಸಿಎಂ ಆಗಿಯೇ ಇರುವಾಗ ಸಿಎಂ ಸಿದ್ದರಾಮಯ್ಯ ಅವರು ಅರಸು ಅವರ ರೀತಿ ಒಂದಷ್ಟು ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸುವುದು ಒಳಿತು. ಸಿದ್ದರಾಮಯ್ಯ ಅಂದೊಡನೆ ಅನ್ನ ಭಾಗ್ಯ ನೆನಪಿಗೆ ಬರುತ್ತದೆ. ಆದರೆ, ಅದು ಅರಸು ಅವರು ಭೂಸುಧಾರಣೆ ಕಾಯ್ದೆಯ ಹತ್ತಿರಕ್ಕೂ ಬರುವುದಿಲ್ಲ. ಅದು ಜನರಿಗೆ ಶಾಶ್ವತ ಬದುಕು ಕಟ್ಟಿಕೊಟ್ಟ ಯೋಜನೆ.
ಹಸಿದವನಿಗೆ ಮೀನು ಕೊಡುವ ಬದಲು ಮೀನು ಹಿಡಿಯವುದನ್ನು ಕಲಿಸಿ ಎಂಬ ಇಂಗ್ಲೀಷ್ ನ ವಾಕ್ಯವೊಂದರ ಸಾಕಾರದಂತಿತ್ತು ಅರಸು ಅವರ ಯೋಜನೆ. ಆದರೆ, ಅನ್ನಭಾಗ್ಯ ಹಸಿದವರಿಗೆ ಮೀನು ಹಿಡಿದು ಕೊಡುವ ಯೋಜನೆಯಾಗಿದೆ. ಹಾಗಂತ ಅದರಿಂದ ಅನುಕೂಲವೇ ಇಲ್ಲವೆಂದೇನಿಲ್ಲ. ದುಡಿಯುವ ಕೈಗಳಿಗೆ ಜಮೀನು ಕೊಟ್ಟ ಅರಸರ ಯೋಜನೆಯ ನಡುವೆಯೂ ರಾಜ್ಯದಲ್ಲಿ ಲಕ್ಷಾಂತರ ಜನ ಭೂರಹಿತರಿದ್ದಾರೆ. ಅರಸುರು ಕೊಟ್ಟ ಭೂಮಿಯನ್ನು ಮರಳಿ, ಭೂಮಾಲೀಕರೆ ಕಿತ್ತುಕೊಂಡು ಬಡವರನ್ನು, ದುರ್ಬಲರನ್ನು ತುಳಿದು ಬಾಳುತ್ತಿದ್ದಾರೆ. ಇದಕ್ಕೊಂದು ಕ್ರಾಂತಿಕಾರಿ ಯೋಜನೆ ತಂದರೆ ಸಿದ್ದರಾಮಯ್ಯ ಅಜರಾಮರ.
ಅಂತೆಯೇ ದಲಿತರಿಗೆ ಅನೇಕ ಯೋಜನೆ ತಂದ ಸಿದ್ದರಾಮಯ್ಯ, SCPTSP ಕಾನೂನಿ ತಂದರು. ಆದರೆ, ಆ ಯೋಜನೆಯ ಮೂಲಕ ದಲಿತರ ಗುಡಿಸಲಿನ ಧೂಳು ಹೊಡೆಯಲು ಕೂಡ ಸಾಧ್ಯ ಆಗಿಲ್ಲ. ಅದನ್ನು ಅದೆಷ್ಟು ಸಾಧ್ಯವೋ ಅಷ್ಡು ದುರ್ಬಳಕೆ ಮಾಡಿಕೊಳ್ಳುವ ವರ್ಗ ಸೃಷ್ಟಿಯಾಗಿದೆ. ಹೀಗಾಗಿ, ಆ ಅನುದಾನ ದಲಿತರ ಆರ್ಥಿಕ ಪ್ರಗತಿಗೆ ಹೆಚ್ಚಿನಂಶ ಬಳಕೆಯಾಗುವಂತೆ ಮಾಡುವುದು, ಲಕ್ಷಾಂತರ ಜನರಿಗೆ ಲಕ್ಷ ರು.ಗಳನ್ನು ಕೊಟ್ಟು, ಅದನ್ನುವಪಡೆದದ್ದೇ ಗೊತ್ತಾಗದಂತೆ ಮಾಡುವ ಬದಲು, ಕೋಟಿಗಳ ಲೆಕ್ಕದಲ್ಲಿ ದಲಿತ ಉದ್ದಿಮೆದಾರರಿಗೆ ಕೊಟ್ಟು, ಆ ಮೂಲಕ ಆ ಸಮುದಾಯಗಳು ಬಲಾಡ್ಯರಾಗುವಂತೆ ಮಾಡುವುದು ಸಿದ್ದರಾಮಯ್ಯ ಅವರ ಮೇಲಿರುವ ಗುರಿ.
ಅಂತೆಯೇ ಹುಬ್ಬಳ್ಳಿಯ ಗರ್ಭಿಣಿ ಕೊಲೆ ನಂತರ ಹೇಳಿದ ಮರ್ಯಾದೆ ಹತ್ಯೆ ವಿರುದ್ಧದ ಕಾನೂನು ಜಾರಿ, ಅದೆಷ್ಟು ಪರಿಣಾಮಕಾರಿಯಾಗಿರಬೇಕೆಂದರೆ, ಇನ್ಮುಂದೆ ದಲಿತ ದೌರ್ಜನ್ಯ ಪ್ರಕರಣಗಳು ಸೊನ್ನೆಯ ಹತ್ತಿರಕ್ಕೆ ಬಂದುಬಿಡುವಂತಿರಬೇಕು.
ಸಮುದಾಯಾಧಾರಿತ ಅಭಿವೃದ್ಧಿ ಜತೆಜತೆಗೆ ಸಾಮಾಜಿಕ ಕ್ರಾಂತಿಯಾಗುವಂತೆ ಯೋಜನೆಗಳನ್ನು ಕೊಡುವುದು ಸಿದ್ದರಾಮಯ್ಯ ಅವರಿಂದಷ್ಟೇ ಸಾಧ್ಯ. ಮುಂದೆ ಬರುವ ಯಾವುದೇ ಸಮುದಾಯದ ಸಿಎಂ ಆದರೂ, ಅಂತಹ ಕ್ರಾಂತಿಕಾರಕ ಹೆಜ್ಜೆಯನ್ನಿಡಲಾರ.
ಸಮಾಜಿಕ ಕ್ರಾಂತಿಗಾಗಿ ನೀವು ಮಾಡಬೇಕಾದ ಕ್ರಮಗಳಿವಾದರೆ, ರಾಜ್ಯದ ಆರ್ಥಿಕ ಸುಭದ್ರತೆಗೆ ಎಲ್ಲ ಜನಾಂಗದ ಏಳಿಗೆಗೆ ದೊಡ್ಡ ಹೆಜ್ಜೆಯನ್ನು ನೀವೇ ಇಡಬೇಕು. ಅತಿಹೆಚ್ಚು ಬಜೆಟ್ ಮಂಡಿಸಿದ ಳ್ಯಾತಿ ಇರುವ ನೀವಷ್ಟೇ ಇಂತಹ ಆರ್ಥಿಕ ಅಭಿಯೋಜಕರಾಗಲು ಸಾಧ್ಯ.ಹೀಗಾಗಿ, ಅಂತಹದ್ದೊಂದು ದೊಡ್ಡ ನಿರೀಕ್ಷೆ ನಿಮ್ಮ ಮೇಲಿದೆ. ನೊಂದ ಸಮಾಜಗಳ ಜತೆಗೆ ಇಡೀ ರಾಜ್ಯ ನಿಮ್ಮ ಮೇಲೆ ಇಂತಹ ಅನೇಕ ನಿರೀಕ್ಷೆಗಳನ್ನಿಟ್ಟಿದೆ.
ಹೀಗಾಗಿ, ಅರಸು ಅವರಂತಹ ಅಚ್ಚಳಿಯದ ಛಾಪು ಮೂಡಿಸುವ ಅವಕಾಶ ನಿಮ್ಮ ಮುಂದಿದೆ. ಹೀಗಾಗಿ, ಅದನ್ನು ಬಳಸಿಕೊಂಡು ಜನಮಾನಸದ ಅರಸರಾಗಿ, ಪ್ರಜಾಪ್ರಭುತ್ವದ ಸೇವಕರಾಗಿ ಎಂಬುದಷ್ಟೇ ನಮ್ಮ ಆಶಯ….

