ಹೊಸಕೋಟೆ : ತಾಲೂಕಿನಲ್ಲಿ ಕಂದಾಯ ಇಲಾಖೆ ಪೋಡಿ ಮುಕ್ತ ಗ್ರಾಮಗಳ ಕಾರ್ಯಕ್ರಮ ಮಾ.4ರಂದು ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 500ಕ್ಕೂ ಹೆಚ್ಚು ಬ್ಲಾಕ್ ಗಳನ್ನು ಮಾಡುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿ 4 ತಾಲೂಕುಗಳಲ್ಲಿ 3.5 ಸಾವಿರ ರೈತರಿಗೆ ಅವರ ಭೂಮಿ ಹಕ್ಕನ್ನು ಸ್ಥಳದಲ್ಲಿಯೇ ವರ್ಗಾವಣೆ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಅದರ ಜತೆಗೆ 10.5 ಸಾವಿರ 4 ತಾಲೂಕುಗಳ ಫೌತಿ ಖಾತೆಗಳನ್ನು ವಿಶೇಷವಾಗಿ ಹೊಸಕೋಟೆ ತಾಲೂಕಲ್ಲಿ 5 ಸಾವಿರ ಫೌತಿ ಖಾತೆಗಳನ್ನು ಅಲ್ಲಿಯೇ ವಿತರಣೆ ಮಾಡಲಾಗುವುದು ಮತ್ತು ವೈಯಕ್ತಿಕ ಸೌಲಭ್ಯಗಳಾದ ಸಾಮಾಜಿಕ ಭದ್ರತೆ ಪೆನ್ಷನ್, ವಿಧವಾ ಮಾಸಾಸನ, ವೃದ್ದಾಪ್ಯ ವೇತನ ವಿತರಣೆ, 94 ಸಿ, 94 ಸಿಸಿ ಹಕ್ಕನ್ನು 53 ಅಡಿಯಲ್ಲಿ ಸಾಗುವಳಿ ಚೀಟಿ ಕೊಡುವಂತಹದ್ದು ಫಲಾನುಭವಿಗಳು ಪಡೆದುಕೊಳ್ಳಬೇಕು. ಸರ್ಕಾರ ಗ್ಯಾರೆಂಟಿಗಳ ಜತೆಗೆ 6ನೇ ಗ್ಯಾರಂಟಿ ಭೂಮಾಲಿಕತ್ವ ಅಥವಾ ಭೂಮಿ ಹಕ್ಕು ಆ ಒಂದು ಗ್ಯಾರೆಂಟಿ ಹಕ್ಕನ್ನು ನಮ್ಮ ಸರ್ಕಾರ ಭದ್ರತೆಯಾಗಿಟ್ಟುಕೊಂಡು ಹಸ್ತಾಂತರ ಮಾಡುತ್ತಿದ್ದೆ ಎಂದು ವಿವರಿಸಿದರು.
ಇಂದು ಕೆಲವು ರೈತರು ಬೇರೆ ಗ್ರಾಮಗಳ ಸರ್ವೆ ನಂಬರ್‌ಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಎರಡು ತರದ ಅಡೆತಡೆಗಳಿವೆ. ಕಂದಾಯ ಇಲಾಖೆಯಲ್ಲಿ ಚರ್ಚೆಯಾಗಿದ್ದು, ಹಾಸನದ ಚನ್ನರಾಯ ಪಟ್ಟಣದ ಗ್ರಾಮದಲ್ಲಿ ಟ್ರಯಲ್ ಬೇಸಿಸ್ ಸರ್ವೆ ನಂ.ತಗೆದುಕೊಂಡು ಮಾಡುತ್ತಿದ್ದಾರೆ. ಅದು ಯಶಸ್ವಿಯಾದಾಗ ರಾಜ್ಯಾದ್ಯಂತ ಮಾಡಲು ಅನುಕೂಲವಾಗುತ್ತೆ. ನಮ್ಮ ತಾಲೂಕಿನಲ್ಲಿ 1,500 ಸರ್ವೆ ನಂಬರ್ ಇದೆಯೋ ಅದನ್ನು ಮಾಡಲು ಅನುಕೂಲವಾಗುತ್ತೆ. ಅದರ ಜತೆಗೆ ರೈತರ ಹತ್ತಿರ ದಾಖಲೆಗಳು ಮಿಸ್ಸಿಂಗ್ ಆಗಿರುತ್ತದೆ. ಅವರೆಲ್ಲರಿಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂಡಿಗಳಿಗೆ ಏನೆಲ್ಲ ಮಾಡಬೇಕು, ಅಂತಹವುಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಫಲಾನುಭವಿಗಳು ಮತ್ತು ಹೆಚ್ಚಿನದಾಗಿ ಕಾರ್ಯಕರ್ತರು 10 ಗಂಟೆಗೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು.
ಟೌನ್ ಬ್ಲಾಕ್ ಅಧ್ಯಕ್ಷ ಬಿ.ವಿ.ಬೈರೇಗೌಡ, ತಹಶೀಲ್ದಾರ್ ಸೋಮಶೇಖರ್, ಎಡಿಎಲ್‌ಆರ್ ಸಂತೋಷ್, ಸುರೇಶ್, ಕೇಶವಮೂರ್ತಿ, ಸುಬ್ಬರಾಜು, ಸತೀಶ್ ಗೌಡ, ರಾಜಶೇಖರಗೌಡ, ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರಿದ್ದರು.

