ಉಪಯುಕ್ತ ಸುದ್ದಿ

ಈಜೀಪುರ ಪ್ಲೈಓವರ್ ಕಾಮಗಾರಿ ಆಗಸ್ಟ್ ನಲ್ಲಿ ಪೂರ್ಣ: ತಾಂತ್ರಿಕ ಕಾರಣದಿಂದ ಕೊನೆಯ ಹಂತದ ಕಾಮಗಾರಿ ತಡ

Share It

ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿ ಆಗಸ್ಟ್ ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಕಾಮಗಾರಿಯನ್ನು ಶೀಘ್ರವಾಗಿ ನಡೆಸುವಂತೆ ಸ್ಥಳೀಯ ಶಾಸಕ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸರಕಾರದ ಮೇಲೆ ಒತ್ತಡ ಹಾಕಿದ ಹಿನ್ನೆಲೆಯಲ್ಲಿ 9 ವರ್ಷದ ಹಿಂದೆ ಆರಂಭವಾದ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. 2.38 ಕಿ.ಮೀ. ಉದ್ದದ ಈ ಮೇಲ್ಸೇತುವೆ 762 ಸೆಗ್ಮೆಂಟ್ ಗಳಲ್ಲಿ ನಿರ್ಮಾಣವಾಗುತ್ತಿದೆ. ಕೆಲ ಸೆಗ್ಮೆಂಟ್ ಗಳ ಜೋಡಣೆಯಷ್ಟೇ ಬಾಕಿಯಿದೆ ಎಂದು ಹೇಳಲಾಗಿದೆ.

ಜಮೀನು ವಶಪಡಿಸಿಕೊಳ್ಳುವುದು ಸೇರಿ ಕಾಮಗಾರಿ ತಡೆಗೆ ಇದ್ದ ಅಡಚಣೆ ನಿವಾರಿಸಲು ಸಚಿವ ರಾಮಲಿಂಗಾ ರೆಡ್ಡಿ ಅವರ ಒತ್ತಡದ ನಂತರ ಸರಕಾರ ಪ್ರತ್ಯೇಕ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ಜೂನ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ, ಕೆಲ ಜಮೀನು ವಶಕ್ಕೆ ಇದ್ದ ತಡೆಗಳು ಮತ್ತು ಎಂಜಿನಿಯರ್ ವರ್ಗಾವಣೆ ಕಾರಣದಿಂದ ಕಾಮಗಾರಿ ಸ್ವಲ್ಪ ತಡೆವಾಗಿದೆ.

ಈಜೀಪುರ ಮೇಲ್ಸೆತುವೆ ಕಾಮಗಾರಿ 2017 ರಲ್ಲಿ ಆರಂಭವಾಗಿತ್ತು. ಆಗ ಸಿಂಪ್ಲೆಕ್ಸ್ ಇರ್ನ್ಫಾಸ್ಟ್ರಕ್ಚರ್ ಕಂಪನಿ ಗುತ್ತಿಗೆ ಪಡೆದಿತ್ತು. ಆದರೆ, ಕಾಮಗಾರಿ ಮುಗಿಸಲು ಕಂಪನಿ ವಿಫಲವಾಗಿತ್ತು. 2024 ರಲ್ಲಿ ಹೈದರಾಬಾದ್ ಮೂಲದ ಬೊಲ್ಲಿನೇನಿ ಸೀನಯ್ಯ ಕಂಪನಿ ಫ್ರೈ.ಲಿ (BSCPL) ಸಂಸ್ಥೆ 15 ತಿಂಗಳಲ್ಲಿ ಕಾಮಗಾರಿ ಮುಗಿಸುವ ಕರಾರಿನೊಂದಿಗೆ ಗುತ್ತಿಗೆ ಪಡೆದಿತ್ತು. ಅದರ ಪ್ರಕಾರ ಜೂನ್ ಗೆ ಕಾಮಗಾರಿ ಮುಗಿಯಬೇಕಿದ್ದು, ಆಗಸ್ಟ್ ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಂಟ್ ಜಾನ್ಸ್ ಜಂಕ್ಷನ್ ಕಡೆಗೆ ಅಂತಿಮ ಹಂತದ ಸೆಗ್ಮೆಂಟ್ ಜೋಡಣೆ ಕಾಮಗಾರಿ ನಡೆಯುತ್ತಿದೆ. ದೊಮ್ಮಲೂರು ಭಾಗದಲ್ಲಿ ರ್ಯಾಂಪ್ ಕಾಮಗಾರಿ ಪ್ರಗತಿಯಲ್ಲಿದೆ. ಮಣ್ಣಿನ ಸೆಟ್ಟಿಂಗ್ಸ್ ಕೆಲಸ ತಡವಾಗುತ್ತಿರುವುದು ಸೇರಿ ಕೆಲ ತಾಂತ್ರಿಕ ಅಡಚಣೆಗಳಿಂದ ಕಾಮಗಾರಿ ವಿಳಂಬವಾಗುತ್ತಿದೆ. ಆದರೆ, ಆಗಸ್ಟ್ ವೇಳೆಗೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳಲಿದ್ದು, ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಅಮಗಾರಿಯ ತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.


Share It

You cannot copy content of this page