ಬೆಂಗಳೂರು: ಆನೇಕಲ್ ತಾಲೂಕಿನ ಚಂದಾಪುರ ಚೋಳರ ಕೆರೆ ಏರಿಯ ಬಳಿ ಪೊದೆಯೊಳಗೆ ಬಟ್ಟೆಯಲ್ಲಿ ಸುತ್ತಿ, ಬ್ಯಾಗ್‌ನಲ್ಲಿ ಬಿಟ್ಟುಹೋಗಲಾದ ನವಜಾತ ಶಿಶು ಪತ್ತೆಯಾಗಿದೆ.
ಶನಿವಾರ ರಾತ್ರಿ ಸ್ಥಳೀಯ ನಿವಾಸಿಗಳು ಪೊದೆ ಬಳಿ ಮಗುವಿನ ಅಳುವ ಶಬ್ದವನ್ನು ಕೇಳಿ ಶಂಕೆಗೊಂಡರು. ಶಬ್ದದ ದಿಕ್ಕಿನಲ್ಲಿ ಪರಿಶೀಲನೆ ನಡೆಸಿದಾಗ, ಬಟ್ಟೆಯಲ್ಲಿ ಸುತ್ತಿ ಬ್ಯಾಗ್‌ನೊಳಗೆ ಇಟ್ಟು ಬಿಟ್ಟುಹೋಗಿದ್ದ ನವಜಾತ ಶಿಶುವನ್ನು ಕಂಡು ಬೆಚ್ಚಿಬಿದ್ದರು. ಕೂಡಲೇ ಶಿಶುವನ್ನು ಹತ್ತಿರದ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಯಿತು.
ಆರೋಗ್ಯ ಕೇಂದ್ರದ ಸಿಬ್ಬಂದಿ ಶಿಶುವಿಗೆ ಅಗತ್ಯ ಆರೈಕೆ ನೀಡಿದ್ದಾರೆ. ವೈದ್ಯರ ಪ್ರಕಾರ, ಶಿಶುವಿಗೆ ಮೆಕೋನಿಯಮ್ ಸ್ಟೈನ್ ಸಮಸ್ಯೆ ಇತ್ತು. ಅಂದರೆ, ಶಿಶು ಜನನದ ಸಮಯದಲ್ಲಿ ತನ್ನದೇ ಮಲವನ್ನು ಸೇವಿಸಿದ್ದರಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣದ ಚಿಕಿತ್ಸೆಯ ನಂತರ ಶಿಶುವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬAದಿದೆ. ಪ್ರಸ್ತುತ ಮಗು ಹಾಲು ಸೇವನೆ ಮಾಡುತ್ತಿದೆ ಹಾಗೂ ಸ್ಥಿತಿ ಸ್ಥಿರವಾಗಿದೆ. ಹೆಚ್ಚಿನ ತಜ್ಞರ ಚಿಕಿತ್ಸೆಗೆ ಶಿಶುವನ್ನು ಬೆಂಗಳೂರು ನಗರದ ವಾಣಿ ವಿಲಾಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಶಿಶುವನ್ನು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಲ್ಲಿ ಇರಿಸಲಾಗಿದ್ದು, ಸುರಕ್ಷಿತ ಆರೈಕೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಿಶುವನ್ನು ವಿವಾಹಪೂರ್ವ ಸಂಬಂಧದಿಂದ ಜನಿಸಿದ ಮಗು ಎಂದು ಅಥವಾ ಹೆಣ್ಣು ಮಗು ಆಗಿರುವ ಕಾರಣ ಬಿಟ್ಟು ಹೋಗಿರುವ ಸಾಧ್ಯತೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.