ನನ್ನ ಹಾಗೂ ಸಿಎಂ ನಡುವೆ ಒಪ್ಪಂದವಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Share It

ಹೈಕಮಾಂಡ್ ಅವರ ಪರ ಇರೋದ್ರಿಂದಲೇ ಅವರು ಸಿಎಂ ಆಗಿರೋದು

ಗೋಕರ್ಣ: “ನನ್ನ, ಸಿಎಂ ನಡುವೆ ಒಂದು ಒಪ್ಪಂದವಾಗಿದೆ. ಹೈಕಮಾಂಡ್ ಒಂದು ಒಪ್ಪಂದಕ್ಕೆ ತಂದಿದೆ. ಆ ಪ್ರಕಾರ ನಾವಿಬ್ಬರೂ ನಡೆದುಕೊಂಡು ಹೋಗುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಗೋಕರ್ಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ನಮ್ಮ ಮಧ್ಯೆ ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಐದು ವರ್ಷ ಇರಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ಹೈಕಮಾಂಡ್ ಅವರ ಪರ ಇಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರ ಇರುವುದಕ್ಕೆ ಅವರು ರಾಜ್ಯದ ಸಿಎಂ ಆಗಿದ್ದಾರೆ” ಎಂದರು.

ಸಿಎಂ ಬದಲಾವಣೆ ಆಗುವುದಿಲ್ಲವೇ ಎಂದು ಕೇಳಿದಾಗ, “ನೀವು ಆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ. ನಮ್ಮಲ್ಲಿ ಅದು ಇಲ್ಲ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ” ಎಂದರು.

ಕಳೆದ ಬಾರಿ ಬಂದಾಗ ನಿಮ್ಮ ಇಷ್ಟಾರ್ಥ ಸಿದ್ಧಿಯಾಗಿತ್ತು ಎಂದು ಹೇಳಿದ್ದೀರಿ, ಈ ಬಾರಿಯೂ ಆಗುವುದೇ ಎಂದು ಕೇಳಿದಾಗ, “ಅದೆಲ್ಲವನ್ನು ನಾನು ಹೇಳುವುದಿಲ್ಲ. ಇದು ನನ್ನ ಹಾಗೂ ಆ ತಾಯಿ ಮಧ್ಯೆ ಇರುವ ವಿಚಾರ. ಭಕ್ತ ಹಾಗೂ ಭಗವಂತನ ನಡುವಣ ವಿಚಾರ.ವಿಘ್ನ ನಿವಾರಕ ವಿಘ್ನೇಶ್ವರನ ದರ್ಶನ ಪಡೆದಿದ್ದೇನೆ. ಮಹಾಬಲೇಶ್ವರನಿಗೆ ಪೂಜೆ ಮಾಡಿದ್ದೇನೆ, ಗಂಗಾಧರೇಶ್ವರನಿಗೆ ಪ್ರಾರ್ಥನೆ ಮಾಡಿದ್ದೇನೆ” ಎಂದರು.

ಹಸನ್ಮುಖಿಯಾಗಿ ತೆರಳುತ್ತಿದ್ದೇನೆ: “ಇಂದು ಗೋಕರ್ಣಕ್ಕೆ ಬಂದಿದ್ದು ದೇವರ ದರ್ಶನ ಭಾಗ್ಯ ನನಗೆ ಸಿಕ್ಕಿದೆ. ಐದು ವರ್ಷಗಳ ಹಿಂದೆ ಆಂದ್ಲೆ ಜಗದೇಶ್ವರಿ ತಾಯಿಯ ಬಳಿಗೆ ಬಂದು, ನಮ್ಮ ಕುಟುಂಬದ ವಿಚಾರವಾಗಿ ಪ್ರಾರ್ಥನೆ ಮಾಡಿದ್ದೆ. ಮತ್ತೆ ಇಲ್ಲಿಗೆ ಬರುವುದಾಗಿ ಪ್ರಾರ್ಥಿಸಿದ್ದೆ. ಅದರಂತೆ ಬಂದು ಜಗದೇಶ್ವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಮಾಡು ತಾಯಿ ಎಂದು ಪ್ರಾರ್ಥನೆ ಮಾಡಿರುವೆ. ನನಗೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವೆ. ಹಸನ್ಮುಖಿಯಾಗಿ ಇಲ್ಲಿಂದ ತೆರಳುತ್ತಿದ್ದೇನೆ” ಎಂದು ತಿಳಿಸಿದರು.


Share It

You May Have Missed

You cannot copy content of this page