ಹಾವೇರಿ(ಸವಣೂರು): ಸವಣೂರು ಬಸ್ ಡಿಪೋದಲ್ಲಿ ಹಲವಾರು ವರ್ಷಗಳಿಂದ ಚಾಲಕರ ಬೋಧಕರಾಗಿ ಕೆಲಸ ಮಾಡುತ್ತಿದ್ದ ಮಹದೇವಪ್ಪ ಅವರು ಅಕಾಲಿಕ ನಿಧನ ಹೊಂದಿರುವುದರಿಂದ ಅವರ ಪುತ್ರನಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡಿ, ಅವರಿಗೆ ದೊರೆಯಬೇಕಿರುವ ಎಲ್ಲ ಹಣಕಾಸನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸವಣೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, ಮಹದೇವಪ್ಪ ಅವರ ಕೆಲಸ ಕಾರ್ಯವನ್ನು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಆಕಸ್ಮಿಕ ಸಾವು ನಮಗೆ ಆಘಾತ ತಂದಿದೆ. ಅವರ ಕುಟುಂಬಸ್ಥರು ದುಖದಲ್ಲಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗನಿಗೆ ಕೆಎಸ್ಆರ್‌ಟಿಸಿಯಲ್ಲಿ ಅನುಕಂಪದ ಆಧಾರದ ನೌಕರಿ ನೀಡಲು ಹಿರಿಯ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ಅವರಿಗೆ ಬರಬೇಕಿದ್ದ ಬಾಕಿ, ಗ್ರ್ಯಾಚುಟಿ ಕೊಡಬೇಕು. ಸಾರಿಗೆ ನೌಕರರು 2024 ರಿಂದ ಹಿಂಬಾಕಿ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಅದನ್ನೂ ಕೊಡುವ ಕೆಲಸ ಮಾಡಬೇಕು ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಈ ಕೆಲಸ ಮಾಡಬೇಕು ಎಂದರು.
ಇದಕ್ಕೂ ತಿಂಗಳುಗಟ್ಟಲೇ ಎಳೆದಾಡುವುದು ಸಮಂಜಸ ಅಲ್ಲ. ನಾನು ಸರ್ಕಾರ, ಎನ್ ಡಬ್ಲ್ಯುಎಸ್‌ಆರ್‌ಟಿಸಿ ಎಂಡಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಆಗ್ರಹಿಸುತ್ತೇನೆ. ಇದರಲ್ಲಿ ಮಧ್ಯ ಪ್ರವೇಶ ಮಾಡಿ ನ್ಯಾಯ ಕೊಡಿಸಿ, ಅವರಿಗೆ ಬರಬೇಕಿರುವ ಹಣಕಾಸಿನ ನೆರವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

