ಮೈಕ್ರೋ ಫೈನಾನ್ಸ್ ಕಿರುಕುಳ : ಮಸೂದೆ ಜಾರಿಗೆ ಕಾನೂನು ಮತ್ತು ಗೃಹ ಸಚಿವರ ಸಭೆ
ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಸರಕಾರ ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿದ್ದು, ಮಸೂದೆ ಜಾರಿಗೆ ತರುವ ಸಂಬAಧ ಕಾನೂನು ಸಚಿವರು ಹಾಗೂ ಗೃಹ ಸಚಿವರ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮತ್ತು ಗೃಹಸಚಿವ ಡಾ. ಜಿ. ಪರಮೇಶ್ವರ್ ಭಾಗವಹಿಸಿದ್ದು, ಸಂಸ್ಥೆಗಳು ಸಾಲ ವಸೂಲಿ ಸಂದರ್ಭದಲ್ಲಿ ದೌರ್ಜನ್ಯ ಎಸಗುವುದು, ಕಿರುಕುಳ ನೀಡುವುದನ್ನು ನಿಷೇಧಿಸುವ “ಕರ್ನಾಟಕ ಮೈಕ್ರೋ ಫೈನಾನ್ಸ್ ಪ್ರಿವೆನ್ಷನ್ ಆಫ್ ಕೋಯೆರ್ಸಿವ್ ಆಂಡ್ ಇನ್‌ಹ್ಯೂಮನ್ ಆಕ್ಷನ್ ೨೦೨೫” ಮಸೂದೆ ಕುರಿತು ಕಾನೂನು ಚರ್ಚೆ ನಡೆದಿದೆ.
ಸಭೆಯಲ್ಲಿ ಕಾನೂನು ಇಲಾಖೆ ಮತ್ತು ಆರ್ಥಿಕ ಇಲಾಖೆಗಳ ಸಲಹೆಯನ್ನು ಪಡೆಯಲಾಗಿದೆ. ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಗಟ್ಟಲು ತ್ವರಿತವಾಗಿ ಕಾನೂನು ತರಬೇಕು ಎಂದು ಮುಖ್ಯಂಮತ್ರಿ ಅವರು ಸೂಚಿಸಿದ್ದಾರೆ. ಈ ಹಿನ್ನೆಲೆ ಹಲವು ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಸಮಾಜದಲ್ಲಿ ಕೆಳಸ್ತರದ ಜನರು ಕಿರುಸಾಲ ತೆಗೆದುಕೊಳ್ಳುತ್ತಾರೆ. ಸಾಲ ವಸೂಲಿ ಮಾಡಲು ಅಮಾನವೀಯವಾಗಿ ವರ್ತಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆಗಳನ್ನು ನಿಲ್ಲಿಸಬೇಕಿದೆ. ಜನ ಊರು ಬಿಡುತ್ತಿರುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಹೀಗಾಗಿ ಮಸೂದೆ ತರಲು ಬಜೆಟ್ ಅಧಿವೇಶನದವರೆಗೂ ಕಾಯಲು ಆಗುವುದಿಲ್ಲ. ಸಭೆಯ ಪ್ರಮುಖ ಅಂಶಗಳನ್ನು ಮುಖ್ಯಮಂತ್ರಿಯವರೊAದಿಗೆ ಚರ್ಚಿಸಿ, ಕ್ಯಾಬಿನೆಟ್ ಮುಂದೆ ತರಲಾಗುವುದು ಎಂದು ಅವರು ಹೇಳಿದರು.
ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದು, ಮೈಕ್ರೋ ಫೈನಾನ್ಸ್ಗಳ ಅಮಾನುಷ ವರ್ತನೆ ಗಮನಕ್ಕೆ ಬಂದ ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಜನರೊಂದಿಗೆ ಒತ್ತಾಯ ಪೂರ್ವಕವಾಗಿ ನಡೆದುಕೊಳ್ಳುವುದು ಸಮಾಜಕ್ಕೆ ಒಳ್ಳೆಯದಲ್ಲ ಎಂದರು.


