ಬೆಂಗಳೂರು : ಕಾಂತಾರ-2 ಸಿನಿಮಾ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ವಿವಾದಕ್ಕೆ ತುತ್ತಾಗುತ್ತಲೇ ಇದ್ದು, ಇದೀಗ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಸಮೀಪ ಚಿತ್ರೀಕರಣ ನಡೆಸುವಾಗ ಚಿತ್ರತಂಡ ಅರಣ್ಯ ಇಲಾಖೆಯ ಅನುಮತಿ ಪಡೆದಿದ್ದರೂ, ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೂಟಿಂಗ್ ಸ್ಥಳಕ್ಕೆ ಆಗಮಿಸಿ, ಶೂಟಿಂಗ್ ನಿಲ್ಲಿಸಿದ್ದಾರೆ.
ಶೂಟಿಂಗ್ ವೇಳೆ ಕಾಡಿನಲ್ಲಿ ಬೆಂಕಿಹಚ್ಚಿರುವುದು ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ. ಇದರಿಂದ ಅರಣ್ಯ ಸಂಪತ್ತು ನಾಶವಾಗುವ ಸಾಧ್ಯತೆಯಿದ್ದು, ಇಂತಹದ್ದೆಲ್ಲವನ್ನು ಅವರು ಸೆಟ್ ನಲ್ಲಿ ಮಾಡಿಕೊಳ್ಳಬೇಕಿತ್ತು. ಕಾಡಿನಲ್ಲಿ ಬೆಂಕಿಹಚ್ಚುವ ಸಾಹಸಕ್ಕೆ ಕೈಹಾಕಬಾರದಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ದೂರವಾಣಿ ಮೂಲಕ ಅರಣ್ಯಾಧಿಕಾರಿಗಳ ಜತೆಗೆ ಮಾತನಾಡಿದ್ದೇನೆ. ಕಾಂತಾರ-2 ಸಿನಿಮಾ ಶೂಟಿಂಗ್‌ಗೆ ಅನುಮತಿ ಕೊಡಲಾಗಿತ್ತು. ಆದರೆ, ಅವರು ಕೆಲ ನಿಯಮಗಳ ಉಲ್ಲಂಘಟನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಧಿಕಾರಿಗಳಿಂದ ತನಿಖೆ ನಡೆಸಿ, ವರದಿ ಪಡೆದು ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.