ಬೆಂಗಳೂರು: ತನ್ನ ಗಂಡನ ಜತೆ ವಾಸಿಸಿದ್ದ ಪ್ರೀತಿಯ ಮನೆಯನ್ನು ಬಿಡಲೊಪ್ಪದ ತಾಯಿಯ ಪ್ರೀತಿಗೆ ಮಣಿದ ಮಕ್ಕಳಿಬ್ಬರು ತಮ್ಮ ಮನೆಯನ್ನೇ ಬೇರೆಡೆಗೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ.
ನಗರದ ತುಬರಹಳ್ಳಿಯ ಬಿಇಎಂಎಲ್ ಲೇಔಟ್ನ 18 ನೇ ಕ್ರಾಸ್ನಲ್ಲಿರುವ ಮನೆಯನ್ನು ಪ್ರಸ್ತುತ ಸ್ಥಳದಿಂದ 100 ಅಡಿ ದೂರಕ್ಕೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಸ್ಥಳಾಂತರ ಕಾರ್ಯವೂ ಆರಂಭವಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿಗಳಾದ ವೈ ದೇವರಾಜ್ ಮತ್ತು ಸಹೋದರ ವೈ.ವಾಸು ಅವರು ತಮ್ಮ ತಂದೆ ನಿರ್ಮಿಸಿದ್ದ ಮನೆಗೆ ಕೆರೆ ತುಂಬಿದಾಗ ನೀರು ತುಂಬುವ ಕಾರಣಕ್ಕೆ ಮನೆಯನ್ನು
ನೆಲಸಮ ಮಾಡಲು ತೀರ್ಮಾನಿಸಿದ್ದರು.
ಆದರೆ, ಅವರ ತಾಯಿ ಶಾಂತಮ್ಮ ತನ್ನ ಗಂಡ ಕಟ್ಟಿದ ಮನೆಯನ್ನು ಕೆಡವಲು ನಿರಾಕರಿಸಿದರು. ತಾಯಿಯ ಭಾವನೆಗೆ ಬೆಲೆ ನೀಡಿದ ಮಕ್ಕಳು ಮನೆಯನ್ನು ಸ್ಥಳಾಂತರ ಮಾಡಿಸಲು ಸಿದ್ಧವಾಗಿದ್ದು, ಇದೀಗ ಕಂಪನಿಯೊAದಕಕೆ ಗುತ್ತಿಗೆ ನೀಡಿ, ಸ್ಥಳಾಂತರ ಕಾರ್ಯ ಆರಂಭಿಸಿದ್ದಾರೆ.
1600 ಚದರ ಅಡಿಯ ಎರಡು ಅಂತಸ್ತಿನ ಮನೆಯನ್ನು ಸ್ಥಳಾಂತರ ಕಾರ್ಯ ನಡೆಸಲಾಗುತ್ತಿದೆ. ಮನೆಯ 100 ಮೀಟರ್ ದೂರದಲ್ಲಿ 10 ಗುಂಟೆ ಜಾಗವಿದ್ದು, ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಇದಕ್ಕೆ 10 ಲಕ್ಷ ರು. ವೆಚ್ಚವಾಗಲಿದ್ದು, ನವೀಕರಣಕ್ಕೆ 5 ಲಕ್ಷ ರು.ವೆಚ್ಚವಾಗಲಿದೆ.
ನಮ್ಮ ಜೀವಮಾನವಿಡೀ ಇದೇ ಜಾಗದಲ್ಲಿ ಬದುಕಿದ್ದೇವೆ. 2002 ರಲ್ಲಿ ನಮ್ಮ ಮನೆಯವರು ಈ ಮನೆ ನಿರ್ಮಾಣ ಮಾಡಿದರು. ಆಗ 11 ಲಕ್ಷ ರು. ಖರ್ಚು ಮಾಡಿದ್ದೆವು. 2 ವರ್ಷದ ಹಿಂದೆ ಅವರು ಸಾವನ್ನಪ್ಪಿದರು. ಈಗ ಮನೆಯನ್ನು ಕೆಡವಿ ಕಟ್ಟುವುದು ನನಗೆ ಇಷ್ಟವಿಲ್ಲ ಎಂದು 70 ವರ್ಷದ ಶಾಂತಮ್ಮ ತಿಳಿಸಿದ್ದಾರೆ.
ಮನೆ ಸ್ಥಳಾಂತರದ ಹೊಣೆಯನ್ನು ಹೊತ್ತಿರುವ ಶ್ರೀ ರಾಮ ಬಿಲ್ಡಿಂಗ್ ಲಿಫ್ಟಿಂಗ್ನ ಎಂಡಿ ಮಾತನಾಡಿ, ನಾವು ದಶಕಗಳಿಂದ ಇಂತಹ ಶಿಫ್ಟಿಂಗ್ ಮಾಡುತ್ತಿದ್ದೇವೆ. ಒಂದು ಕಿಟಕಿ, ಬಾಗಿಲಿ ಮುರಿಯದೆ ಆಸ್ತಿಗೆ ಯಾವುದೇ ಹಾನಿಯಾಗದೆ ಎಚ್ಚರಿಕೆಯಿಂದ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸ್ಥಳಾಂತರಕ್ಕೆ 200 ಕಬ್ಬಿಣದ ಜಾಕ್ಗಳು, 125 ಕಬ್ಬಿಣದ ರೋಲರ್ಗಳು ಮತ್ತು ಏಳ ಮುಖ್ಯ ಜಾಕ್ಗಳನ್ನು ಬಳಸಲಾಗಿದೆ. ಈಗಾಗಲೇ 15 ಅಡಿಗಳಷ್ಟು ಸ್ಥಳಾಂತರ ಮಾಡಲಾಗಿದ್ದು, 30 ದಿನಗಳಲ್ಲಿ 85 ಅಡಿ ಸ್ಥಳಾಂತರ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ ಎಂದು ಟೈಮ್ಸ್ ಆಪ್ ಇಂಡಿಯಾ ವರದಿ ಮಾಡಿದೆ.