ಬೆಂಗಳೂರು: 5000 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಮತ್ತು ಫೋಟೋ ಇಟ್ಟುಕೊಂಡಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕನ ಮೇಲಿನ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಕೋಲಾರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಂದ ಶೌಚ ಗುಂಡಿ ಸ್ವಚ್ಛ ಗೊಳಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ವೇಳೆ ಶಿಕ್ಷಕ ಮುನಿಯಪ್ಪನನ್ನು ಬಂಧಿಸಿ, ಆತನ ಬಳಿಯಿದ್ದ ನಾಲ್ಕು ಮೊಬೈಲ್ ವಶಕ್ಕೆ ಪಡೆಯಲಾಗಿತ್ತು.
2023 ರ ಡಿಸೆಂಬರ್17 ರಂದು ನಡೆದಿದ್ದ ಘಟನೆಯ ಕುರಿತು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಅನೇಕ ಭಯಾನಕ ಸತ್ಯಗಳು ಗೊತ್ತಾಗಿದ್ದವು. ಮುನಿಯಪ್ಪ ಮಕ್ಕಳನ್ನು ಶೌಚಗುಂಡಿಗಿಳಿಸಿ ಸ್ವಚ್ಚಗೊಳಿಸುವುದು ಮಾತ್ರವಲ್ಲ, ಹಾಸ್ಟೆಲ್ ನ ಹೆಣ್ಣುಮಕ್ಕಳ ನಗ್ನ ವಿಡಿಯೋ ಸೆರೆಹಿಡಿಯುತ್ತಿದ್ದ ಎಂಬುದು ಬೆಳಕಿಗೆ ಬಂದಿತ್ತು.
ಪೊಲೀಸರು ವಶಪಡಿಸಿಕೊಂಡಿದ್ದ ಮೊಬೈಲ್ ಗಳಲ್ಲಿ ಚಿತ್ರೀಕರಿಸಿದ 5000 ಸಾವಿರ ವಿಡಿಯೋ, ಫೋಟೊಗಳು ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು.
ಇದೀಗ ಆರೋಪಿ ಶಿಕ್ಷಕ ತನ್ನ ಮೇಲಿನ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಹೈಕೋರ್ಟ್ ಆತನ ಮನವಿಯನ್ನು ತಿರಸ್ಕರಿಸಿದ್ದು, ಆತನ ಅರ್ಜಿಯನ್ನು ರದ್ದುಗೊಳಿಸಿದೆ.