ಕೊಪ್ಪಳ: ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಒಕ್ಕೂಟ (RBKMUL) ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ ಲೀಟರ್‌ಗೆ 1.50 ರೂ. ಕಡಿತಗೊಳಿಸಿದೆ. ಒಕ್ಕೂಟಕ್ಕೆ ಆರ್ಥಿಕ ನಷ್ಟವಿದೆ, ಹೀಗಾಗಿ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ 1.50 ರೂ. ಕಡಿತಗೊಳಿಸಲಾಗಿದೆ ಎಂದು ಒಕ್ಕೂಟ ಹೇಳಿದೆ.
ದರ ಕಡಿತಗೊಳಿಸುವುದಕ್ಕಿಂತ ಮುಂಚೆ ಲೀಟರ್ ಹಾಲನ್ನು 30.50 ರೂಪಾಯಿಗೆ ಖರೀದಿಸಲಾಗುತ್ತಿತ್ತು. ಇದೀಗ ಪ್ರತಿ ಲೀಟರ್ 29 ರೂ. ನೀಡಿ ಖರೀದಿಸಲಾಗುತ್ತಿದೆ. ಇದರಿಂದ ಹಾಲು ಉತ್ಪಾದಕರಿಗೆ ಸಂಕಷ್ಟವಾಗಿದೆ ಎಂದು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನನಿತ್ಯ 2.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 1.60 ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಮೊಸರು, ಮಜ್ಜಿಗೆ ಮಾರಾಟದಲ್ಲಿ ಇಳಿಕೆಯಾಗಿದೆ. ಉಳಿದ 60 ರಿಂದ 70 ಸಾವಿರ ಲೀಟರ್ ಹಾಲನಿಂದು ಪುಡಿ ತಯಾರಿಸಲಾಗುತ್ತಿದೆ.
ಹಾಲಿನ ಪುಡಿ ದರ ವಿಶ್ವ ಮಾರುಕಟ್ಟೆಯಲ್ಲಿ 85 ರೂ. ಇದೆ. ಹಾಲಿನ ಒಕ್ಕೂಟ ನಷ್ಟದಲ್ಲಿದ್ದು, ವೆಚ್ಚ ಸರಿದೂಗಿಸಲು ದರ ಕಡಿತಗೊಳಿಸುವುದು ಅನಿವಾರ್ಯ ಎಂದು ಒಕ್ಕೂಟ ತಿಳಿಸಿದೆ.