16ನೇ ಕೇಂದ್ರ ಹಣಕಾಸಿನ ಆಯೋಗದೊಂದಿಗೆ ಶುಕ್ರವಾರ ಸಭೆ
ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ವಿಶ್ವಾಸವಿದೆ- ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: 16ನೇ ಕೇಂದ್ರ ಹಣಕಾಸಿನ ಆಯೋಗದವರೊಂದಿಗೆ ಶುಕ್ರವಾರ ಸಭೆ ನಡೆಯಲಿದ್ದು, 15 ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವರೆಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ವಿವರಿಸಲಾಗುವುದು. ಕರ್ನಾಟಕ, ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ ಎಂದು ಮನದಟ್ಟು ಮಾಡಿ, ತೆರಿಗೆ ಹಂಚಿಕೆಯನ್ನು ಶೇ. 41 ರಿಂದ ಶೇ.50 ಕ್ಕೆ ಹೆಚ್ಚಿಸುವಂತೆ ಒತ್ತಾಯಿ ಸಲಾಗುವುದು. ಸೆಸ್ ಮತ್ತು ಸರ್ಚಾಜ್ ಗಳಲ್ಲಿ ರಾಜ್ಯಗಳಿಗೂ ಪಾಲು ನೀಡಬೇಕು. ಸೆಸ್ ಮತ್ತು ಸರ್ಚಾಜುಗಳು ಹೆಚ್ಚುತ್ತಿದ್ದು, ರಾಜ್ಯಕ್ಕೆ ತೆರಿಗೆ ಹಂಚಿಕೆ ಕಡಿಮೆಯಾಗುತ್ತಿರುವುದನ್ನು ಹಣಕಾಸು ಆಯೋಗದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ನಿವೇಶನ ಹಂಚಿಕೆ ಕಾನೂನಾತ್ಮಕವಾಗಿದೆ
ರಾಹುಲ್ ಖರ್ಗೆಯವರ ಟ್ರಸ್ಟ್ ಗೆ ಸಿಎ ನಿವೇಶನ ಹಂಚಿಕೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿ, ಟ್ರಸ್ಟ್ ಗೆ ಕಾನೂನಾತ್ಮಕವಾಗಿ ನಿವೇಶನ ನೀಡಲಾಗಿದೆ. ಕಾನೂನು ಪ್ರಕಾರ ನಿವೇಶನ ನೀಡಿರುವುದರಿಂದ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ಬಿಜೆಪಿಯವರ ಕಾಲದಲ್ಲಿ ಚಾಣಕ್ಯ ವಿವಿಗೆ ಹಾಗೂ ಆರ್ ಎಸ್ ಎಸ್ ನ ವಿವಿಧ ಟ್ರಸ್ಟ್ಗಳಿಗೆ ಎಕರೆಗಟ್ಟಲೆ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.


