ಸಾಯೋದ್ರೊಳಗೆ ಒಮ್ಮೆ ನೋಡಿ ಜೋಗಾದ್ ಗುಂಡಿ:ಆದ್ರೆ ಜೇಬಲ್ಲಿ ಇರ್ಬೇಕು ದುಡ್ಡು ದಂಡಿ ದಂಡಿ !
ಜೀವನದಲ್ಲಿ ಒಮ್ಮೆಯಾದ್ರು ಜೋಗದ ಗುಂಡಿ ನೋಡಬೇಕು ಎಂಬ ಮಾತಿದೆ. ಮಳೆಗಾಲದಲ್ಲಿ ಜೋಗವು ಮೈ ದುಂಬಿ ಹರಿಯುತ್ತದೆ. ಅದರ ರಮಣೀಯ ದೃಶ್ಯ ನೋಡಲು ನಿತ್ಯ ಸಾವಿರಾರು ಮಂದಿ ಬರುತ್ತಾರೆ. ಸದ್ಯ ಈಗ ಜೋಗದ ಟಿಕೇಟ್ ಶುಲ್ಕ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಬೇಸರಗೊಂಡಿದ್ದಾರೆ.
ಜೋಗ ನಿರ್ವಹಣಾ ಪ್ರಾಧಿಕಾರವು 183.7 ಕೋಟಿ ರೂ ವೆಚ್ಚದಲ್ಲಿ ಜೋಗದ ಅಭಿವೃದ್ಧಿಗೆ ಕೈ ಹಾಕಿರುವ ಹಿನ್ನೆಲೆಯಲ್ಲಿ ಟಿಕೇಟ್ ದರ ಹೆಚ್ಚಿಸಲು ಮುಂದಾಗಿದೆ.
ಜಲಪಾತ ವೀಕ್ಷಣೆಗೆ ಈ ಹಿಂದೆ ಬಸ್ಸೊಂದಕ್ಕೆ 150 ರೂ ಪ್ರವೇಶ ಶುಲ್ಕ ಇತ್ತು. ಈಗ ಅದನ್ನು 200 ರೂ ಗೆ ಹೆಚ್ಚಿಸಲಾಗಿದೆ. ಟಿಟಿ, ಮಿನಿ ಬಸ್ ದರ 100 ರಿಂದ 150ಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ಆಟೋ ರಿಕ್ಷಾಗೆ 30 ರಿಂದ 40 ರೂ ಬೈಕ್ ಗೆ 20 ರಿಂದ 30 ರೂ ಹೆಚ್ಚಿಸಲಾಗಿದೆ. ಇನ್ನು ಪ್ರವಾಸಿಗರಿಗೆ ಈ ಹಿಂದೆ ಒಬ್ಬರಿಗೆ 10 ರೂ ಪ್ರವೇಶ ದರವಿತ್ತು. ಈಗ ಅದನ್ನು 20 ರೂ ಗೆ ಹೆಚ್ಚಿಸಲಾಗಿದೆ.
ವಿದೇಶ ಪ್ರವಾಸಿಗರಿಗೆ ಈ ಹಿಂದೆ 560 ರೂ ಪ್ರವೇಶ ದರವಿತ್ತು. ಈಗ ಅದನ್ನು 600 ರೂ ಗೆ ಹೆಚ್ಚಿಸಲಾಗಿದೆ. ಜೋಗ ವೀಕ್ಷಣೆಗೆ 6 ರಿಂದ 16 ವರ್ಷದೊಳಗಿನ ಮಕ್ಕಳಿಗೆ 10 ರೂ ಶುಲ್ಕವನ್ನು ನಿಗಧಿ ಮಾಡಲಾಗಿದೆ.
ಕ್ಯಾಮೆರಾ ತೆಗೆದುಕೊಂಡು ಹೋದರೂ ಅದಕ್ಕೂ100 ರೂ ಶುಲ್ಕವನ್ನು ನಿಗದಿಪಡಿಸಲಾಗಿದೆ. ಡ್ರೋನ್ ಬಳಕೆಗೆ 500 ರೂ ಪ್ರವೇಶ ಶುಲ್ಕ ಪಾವತಿಸಬೇಕಿದೆ. ವಿಕಲಚೇತನರು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಪತ್ರಿಕಾ ವರದಿಗಾರರು, ಟಿವಿ ಮಾಧ್ಯಮದವರಿಗೆ ಉಚಿತ ಪ್ರವೇಶವಿದೆ.


