ಅಂಕಣ ಸುದ್ದಿ

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು

Share It

ಕನ್ನಡ ಸಾಹಿತ್ಯ ಇಡೀ ವಿಶ್ವದಲ್ಲೇ ಸಂಪದ್ಭರಿತ ಸಾಹಿತ್ಯ ಎನಿಸಿಕೊಂಡಿದೆ‌. ಕನ್ನಡಕ್ಕಾಗಿ ಅನೇಕ ಕವಿಮಾನ್ಯರು ಬರೆದು ಬಂಗಾರವಾಗಿದ್ದಾರೆ. ಇಂತಹ ಸಾಹಿತ್ಯ ಪರಂಪರೆಗೆ ಕೊಡುಗೆ ನೀಡಿದ ಕೆಲವೊಂದಿಷ್ಟು ಮಹನೀಯರ ತ್ಯಾಗ ಮತ್ತು ಪರಂಪರೆಯ ಕಿರುಪರಿಚಯ ಇಲ್ಲಿದೆ.

ಗಳಗನಾಥರು:-ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು. ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರಸ್ವತಿಯನ್ನು ಹೊತ್ತು ತಂದಿರುವೆ. ಲಕ್ಷ್ಮಿಯೊಂದಿಗೆ ಸರಸ್ವತಿಯನ್ನು ಮನೆ ತುಂಬಿಸಿಕೊಳ್ಳಿ ಎಂದು ಹೇಳುತ್ತಾ, ರಾತ್ರಿ ದೇವಸ್ಥಾನದ ಅಂಗಳದಲ್ಲಿ ಮಲಗಿ, ಮಾರನೆಯ ದಿನ ಊರ ಕೆರೆ ಕಟ್ಟೆಗಳಲ್ಲಿ ಸ್ನಾನ ಮಾಡಿ, ಬೆಲ್ಲ ಕೊಬರಿ ತಿಂದುಕೊಂಡು ಊರೂರಿಗೆ ತಲೆಯ ಮೇಲೆ ಪುಸ್ತಕ ಹೊತ್ತು ಕನ್ನಡ ಸಾರಸ್ವತ ಲೋಕವನ್ನು ಮನೆ ಮನಗಳಿಗೆ ಹಂಚಿದವರು ನಮ್ಮ ಗಳಗನಾಥರು. ಅವರು ಸತ್ತಮೇಲೆ ಅಂತ್ಯಸಂಸ್ಕಾರ ಮಾಡಲೂ ಇವರ ಮನೆಯವರ ಬಳಿ ಹಣವಿರಲಿಲ್ಲ. ಪುಸ್ತಕಗಳಿಂದಲೇ ಇವರ ಅಂತ್ಯಸಂಸ್ಕಾರ ಮಾಡಬೇಕಷ್ಟೇಯೆಂದು ಅವರ ಮನೆಯವರು ಅ ಸಂದರ್ಭದಲ್ಲಿ ನೊಂದುಕೊಂಡು ನುಡಿದಿದ್ದರು.

ವಿ.ಸೀತಾರಾಮಯ್ಯ🙏🏻
ಇವರು ದಿನಾ ಬೆಳಿಗ್ಗೆ ಹೊಟೇಲಿನಿಂದ ಹತ್ತು ಇಡ್ಲಿ ತರಿಸುತ್ತಿದ್ದರಂತೆ.ಅದರಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿಂದು ಉಳಿದ ಒಂಬತ್ತು ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು. ಇದನ್ನು ಅವರು ತಮ್ಮ ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು. ತಾವೂ ಬದುಕುತ್ತಾ ಎಲ್ಲವನ್ನೂ ಬದುಕಿಸಬೇಕೆಂಬ ಅವರ ನಿರ್ಮಲ ಹೃದಯ ನಮಗೆ ದಾರಿದೀಪ.

ದ.ರಾ.ಬೇಂದ್ರೆ:-🙏🏻 ಇವರೊಮ್ಮೆ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಚಪ್ಪಲಿ ಕಿತ್ತುಹೋಗುತ್ತದೆ. ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ದೂರ ನಡೆದುಕೊಂಡು ಬಂದಮೇಲೆ, ದಾರಿಪಕ್ಕ ಕೂತಿದ್ದ ಚಮ್ಮಾರ ಸಿಗುತ್ತಾನೆ. ಬಿರುಬಿಸಿಲು ಆಗಿದ್ದರಿಂದ ಬೇಂದ್ರೆ ಅಜ್ಜ ಛತ್ರಿಬಿಡಿಸಿಕೊಂಡಿದ್ದರು. ಚಮ್ಮಾರ ತಮ್ಮ ಚಪ್ಪಲಿಯನ್ನು ರಿಪೇರಿ ಮಾಡುವಾಗ ಅವರು ತಮ್ಮ ಛತ್ರಿಯನ್ನು ಬಿಸಿಲಲ್ಲಿದ್ದ ಚಮ್ಮಾರನಿಗೆ ಹಿಡಿದಿದ್ದರು..! ಇದರಿಂದ ಮುಜುಗರಗೊಂಡ ಚಮ್ಮಾರ, ನಾನು ದಿನಾ ಬಿಸಿಲಲ್ಲೇ ಕೂತು ಕೆಲಸ ಮಾಡುವವನು ನನಗಿದೆಲ್ಲ ಬೇಡ ಅಂದಿದ್ದಕ್ಜೆ ಬೇಂದ್ರೆ ಅಜ್ಜ ನೀನಿಗ ನಿನ್ನ ಕೆಲಸ ಮಾಡುತ್ತಿದ್ದೀಯ, ನಾನೀಗ ನನ್ನ ಕೆಲಸ ಮಾಡುತ್ತಿದ್ದೇನೆ ಅಂದರಂತೆ…!. ಸರ್ವ ಸಮತಾ ಭಾವದ ವ್ಯಕ್ತಿತ್ವ ಅವರದಾಗಿತ್ತು.

ಡಿವಿಜಿ:-🙏🏻
ಡಿವಿಜಿಯವರು ತಮ್ಮ ಹೆಂಡತಿಯನ್ನು ಆಪ್ತರೊಬ್ಬರ ಮದುವೆಗೆ ಹೋಗಲು ಹೇಳಿ ತಾವು ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದರು.ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿರೋದನ್ನು ನೋಡಿ ಸಿಟ್ಟಾದ ಡಿವಿಜಿ, ಮದುವೆಗೆ ಯಾಕೆ ಹೋಗಲಿಲ್ಲವೆಂದು ಹೆಂಡತಿಯನ್ನು ಪ್ರಶ್ನಿಸಿದರು. ಅವರ ಪತ್ನಿ, ಮಗನನ್ನು ಕಳಿಸಿದ್ದೇನೆ ಅಂದರು. ಡಿವಿಜಿ ಬಹಳ ಆತ್ಮೀಯರ ಮದುವೆ ಎಂದು ಹೇಳಿದ್ದೆನ್ನಲ್ಲ ನೀನೇ ಹೋಗಬೇಕಿತ್ತು ಎಂದು ಮತ್ತೊಮ್ಮೆ ಏರಿದ ಧ್ವನಿಯಲ್ಲಿ ಹೇಳಿದರು. ಆಗ ಅವರ ಪತ್ನಿ,’ನನ್ನತ್ರ ಇರೋದು ಒಂದೇ ಸೀರೆ. ಅದು ಕೂಡ ಅಲ್ಲಿ ಇಲ್ಲಿ ಹರಿದಿದೆ.ಅದನ್ನು ಉಟ್ಕೊಂಡು ಮದ್ವೆಗೆ ಹೋದ್ರೆ ನನ್ ಯಜಮಾನ್ರ ಮಾನ ಹೋಗುತ್ತೆ. ಅದ್ಕೆ ಮಗನನ್ನು ಕಳಿಸಿದೆ ಅಂದರಂತೆ. ಈ ಮಾತನ್ನು ಕೇಳಿದ ಡಿವಿಜಿಯವರಿಗೆ ಮರು ಮಾತನಾಡಲು ಅವಕಾಶವೇ ಇರಲಿಲ್ಲ.

ತಿರುಕ ನೀನು ಈ ಬ್ರಹ್ಮಪುರಿಯೊಳಗೆ,
ಸಿರಿಯಿದ್ದೊಡೇನು, ಪರಿಜನರಿದ್ದೋಡೇನು ? ಎನ್ನುವ ಮನಸ್ಸು ಅವರದಾಗಿತ್ತು.

ಮಾಸ್ತಿ:-🙏🏻 ಜಿಲ್ಲಾಧಿಕಾರಿಯಾಗಿದ್ದ ಮಾಸ್ತಿಯವರು ಒಮ್ಮೆ ಊರಭೇಟಿಗೆ ತೆರಳಿರುತ್ತಾರೆ. ದಾರಿ ಮಧ್ಯೆ ಬಾಯಾರಿಕೆ ಆದ್ದರಿಂದ ಸಾರ್ವಜನಿಕ ಬಾವಿಯಿಂದ ನೀರು ಸೇದುತ್ತಿದ್ದ ವ್ಯಕ್ತಿಯ ಬಳಿ ಒಂದು ಬೊಗಸೆ ಕುಡಿಯಲು ನೀರು ಕೇಳುತ್ತಾರೆ. ಅವನು ನೀರನ್ನು ಸೇದಿ ಮಾಸ್ತಿಯವರಿಗೆ ಕೊಡುವ ಬದಲು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯುತ್ತಾನೆ.ಮಾಸ್ತಿಯವರಿಗೆ ಅವನು ನೀರು ಕೊಡದ್ದು ನೋಡಿ ಮುಜುಗರವಾಗುತ್ತದೆ. ಮತ್ತೆ ಅವನು ಕೊಡವನ್ನು ಬಾವಿಗಿಳಿಸಿ ನೀರು ಸೇದುತ್ತಾನೆ. ಈ ಬಾರಿ ಮಾಸ್ತಿಯವರನ್ನು ಕರೆದು ಬೊಗಸೆ ಹಿಡಿಯುವಂತೆ ಹೇಳಿ ನೀರು ಸುರಿಯುತ್ತಾನೆ. ಮಾಸ್ತಿಯವರು ಆಶ್ಚರ್ಯದಿಂದ ಕೇಳುತ್ತಾರೆ ಆಗಲೆ ಯಾಕೆ ನೀನು ನನಗೆ ನೀರು ಕೊಡಲಿಲ್ಲ ಎಂದು. ಅದಕ್ಕವನು ಸ್ವಾಮಿ ಈ ಬಾವಿ ತೋಡಿಸುವ ಮೊದಲು ಡಿಸಿಯವರು, ಯಾರೇ ನೀರು ಸೇದಿದರು ಮೊದಲ ಕೊಡವನ್ನು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯಬೇಕು, ಅ ನೀರು ಪ್ರಾಣಿಪಕ್ಷಿಗಳಿಗೆ ಕುಡಿಯೋಕೆ ಉಪಯೋಗವಾಗಬೇಕು ಎಂದಿದ್ದರು.ಹೀಗಾಗಿ ಈ ಊರಿನವರು ಅವರ ಅ ಮಾತನ್ನು ಪಾಲಿಸುತ್ತಿದ್ದೇವೆ ಎಂದ. ಅಂದಹಾಗೆ ಹಾಗೆ ಆದೇಶ ಮಾಡಿದ್ದ ಡಿಸಿ ಮಾಸ್ತಿಯವರೇ ಆಗಿದ್ದರು…! ಊರಿನವರ ಪ್ರಾಮಾಣಿಕತೆಯನ್ನು ನೋಡಿ ಮಾಸ್ತಿಯವರ ಕಣ್ಣುಗಳು ಒದ್ದೆಯಾಗಿದ್ದವು..!

ಸ್ವಾರ್ಥವಿಲ್ಲದಾ ಬದುಕು ಸರ್ವಕಾಲಕ್ಕೂ ಶ್ರೇಷ್ಠ ಎಂಬುದನ್ನು ತೋರಿಸಿಕೊಟ್ಟವರಿವರು.

ದೇವುಡು

ಮಯೂರ ವರ್ಮನ ಬಗ್ಗೆ ಬೆಳಕು ಚೆಲ್ಲಿ ಐತಿಹಾಸಿಕ ಕಾದಂಬರ ಬರೆದರಿವರು. ಅವರ ಕಾಲು ಗ್ಯಾಂಗರೀನ್ ಗೆ ಒಳಗಾದಾಗ ಅವರನ್ನು ಯಾವುದೋ ಒಂದು ಸಮಾರಂಭಕ್ಕೆ ನಾಲ್ಕು ಜನ ಎತ್ತಿಕೊಂಡು ಹೋಗುವಾಗ *ನೋಡ್ರಯಯ ನಾನೆಷ್ಟು ಅದೃಷ್ಠವಂತ, ಎಲ್ಲರೂ ಸತ್ತಾಗ ಅವರನ್ನು ನಾಲ್ಕು ಜನ ಹೊತ್ತೊಯ್ದರೆ ನಾನು ಬದುಕಿದ್ದಾಗಲೇ ನಾಲ್ಕು ಜನರ ಮೇಲೆ ಹೋಗುವ ಅದೃಷ್ಠಶಾಲಿ ಎಂದು ವಾಸ್ತವತೆಯನ್ನು ಅರುಹಿದ್ದವರು. ದೇವರು ನನ್ನ ಕಾಲು ಕಿತ್ತುಕೊಂಡ ಆದರೆ ಕನ್ನಡ ಕಟ್ಟುವ ನನ್ನ ಕೈಂಕರ್ಯವನ್ನ ಅವನು ಕಿತ್ತುಕೊಳ್ಳಲಾರ ಎಂದು ಅಭಿಮಾನದಿಂದ ಹೇಳುತ್ತಿದ್ದವರು.

ಇಂಥಃ ಮಹನೀಯರಿಂದಲೇ ಕನ್ನಡ ಉಳಿದು ಬೆಳಿದಿದ್ದು.

ಟಿ ಎಸ್ ವೆಂಕಣ್ಣಯ್ಯ

ಮನೆಯಲ್ಲಿಯೇ ಕವಿಗೋಷ್ಠಿ ನಡೆಸಿ ಕನ್ನಡ ಕಟ್ಟಿದವರು. ಒಮ್ಎ ಹೀಗೆ ಕವಿಗೋಷ್ಠಿ ಮನೆಯ ಮಹಡಿಯಲ್ಲಿ ನಡೆಯುತ್ತಿತ್ತು. ಅವರ ಪುತ್ರ ಮರಣಿಸಿದ ಸುದ್ದಿಯನ್ನು ಅವರ ಶ್ರೀಮತಿ ಅವರ ಕಿವಿಯಲ್ಲಿ ಉಸುರಿಸಿದರು. ಕವಿಗೋಷ್ಠಿಗೆ ಧಕ್ಕೆ ಬರಬಾರದೆಂದು ಮನಸ್ಸನ್ನು ಕಲ್ಲು ಮಾಡಿಕಂಡು ಕವಿಗೋಷ್ಠಿ ನಡೆಸಿ, ಅದು ಮುಗಿದ ನಂತರ ಅವರ ಕಣ್ಣಾಲೆಗಳಲ್ಲಿ ಕಣ್ಣೀರು ಧುಮ್ಇಕ್ಕಿತ್ತು. ಆಗ ಇತರರು ಇದಕ್ಕೆ ಕಾರಣ ಕೇಳಿದಾಗ ನಡೆದ ವಿಷಯವನ್ನು ಸಭೆಗೆ ಆಗ ತಿಳಿಸಿದರು. ಆಗ ಅವರೆಲ್ಲರೂ ಹೀಗೇಕೆ ಮಾಡಿದಿರಿ ? ಎಂದು ಪ್ರಶ್ನಿಸಿದಾಗ ಕನ್ನಡ ಕಟ್ಟುವ ಕೆಲಸ ನಿಲ್ಲಬಾರದೆಂದೂ ಈ ರೀತಿ ಮಾಡಿದೆ ಎಂದು ಎಲ್ಲಕ್ಕೂ ಕನ್ನಡವೇ ಮಿಗಿಲು ಎಂದು ತೋರಿಸಿದ ಮಹಾತ್ಮರೀತ.

ಕನ್ನಡ ಉಳಿದಿದ್ದೇ ಇಂಥಹವರ ಕೊಡುಗೆಯಿಂದ

ಈ ಮೇರು ಸಾಹಿತಿಗಳು ನಮ್ಮ ನಾಡಿಗೆ ಆಸ್ತಿ


Share It

You cannot copy content of this page