ಮೈಸೂರು: ನಾಡಹಬ್ಬ ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ವಿಜಯ ದಶಮಿ ದಿನವಾದ ಇಂದು ತೆರೆ ಬೀಳಲಿದೆ.
ಅಂಬಾ ವಿಲಾಸ ಅರಮನೆ ಆವರಣದ ಬಲರಾಮ ದ್ವಾರದ ಮೇಲೆ ಮಧ್ಯಾಹ್ನ 1-41ರಿಂದ 2-10 ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಬಳಿಕ ವಿಜಯ ದಶಮಿ ಮೆರವಣಿ ಆರಂಭವಾಗಲಿದೆ.
ಸಂಜೆ 4 ರಿಂದ 4.30ರ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರ ಇತರೆ ಗಣ್ಯರು ಅಂಬಾರಿಯಲ್ಲಿ ಕೂತ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವರು.
750 ಕೆಜಿ ತೂಕದ ಅಂಬಾರಿಯಲ್ಲಿ ವಿರಾಜಮಾನಾಳದ ಅಧಿದೇವತೆ ಚಾಮುಂಡೇಶ್ವರಿ ದೇವಿ ವಿಗ್ರಹ ಹೊತ್ತ ‘ಅಭಿಮನ್ಯು’ ನೇತೃತ್ವದ ಗಜಪಡೆ ಸಾಗಲಿದೆ. ವಿವಿಧ ಜಿಲ್ಲೆಗಳ ಕಲಾವಿದರು ಅಥವಾ ಸಾಂಸ್ಕೃತಿಕ ತಂಡಗಳ ಪ್ರದರ್ಶನ, ಆಕರ್ಷಕ ಸ್ತಬ್ಧ ಚಿತ್ರದೊಂದಿಗೆ ಬನ್ನಿಮಂಟಪದವರೆಗೂ ಸುಮಾರು 5 ಕಿ. ಲೋ. ವರೆಗೂ ಮೆರವಣಿಗೆ ಸಾಗಲಿದೆ.
ವಿವಿಧ ಯೋಜನೆಗಳು ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸಂದೇಶ ಬಿಂಬಿಸುವ ವಿವಿಧ ಸರ್ಕಾರಿ ಇಲಾಖೆಗಳ ಸ್ತಬ್ಧಚಿತ್ರಗಳು ಮೆರವಣಿಗೆಯ ಭಾಗವಾಗಲಿವೆ. ಜಂಬೂ ಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 40ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ನವರಾತ್ರಿ ಅಂಗವಾಗಿ ಒಂಬತ್ತು ದಿನಗಳಿಂದ ಮೈಸೂರಿನ ಅರಮನೆ, ಪ್ರಮುಖ ಬೀದಿಗಳು, ವೃತ್ತಗಳು ಮತ್ತು ಕಟ್ಟಡಗಳ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.
ಜಂಬೂ ಸವಾರಿ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ 4ಸಾವಿರಕ್ಕಹ ಹೆಚ್ಚು ಮಂದಿ ಪೊಲೀಸರು ಕಾವಲು ಇದ್ದಾರೆ.