ಕೆ.ಸಿ. ಜನರಲ್ ಆಸ್ಪತ್ರೆ, ಆಸ್ಪತ್ರೆಯಲ್ಲ, ಭೂತಬಂಗಲೆ: ಉಪಲೋಕಾಯುಕ್ತ ಬಿ.ವೀರಪ್ಪ ಗರಂ
ಬೆಂಗಳೂರು: ಕೆ.ಸಿ. ಜನರಲ್ ಆಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಉಪಲೋಕಾಯುಕ್ತ ಬಿ.ವೀರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಆಸ್ಪತ್ರೆಯೋ, ಭೂತಬಂಗಲೆಯೋ ಎಂಬ ಅನುಮಾನ ಬರುತ್ತದೆ ಎಂದಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಆಸ್ಪತ್ರೆಯ ಡೆಂಟಲ್ ವಿಭಾಗದಲ್ಲಿ ಸರಿಯಾದ ವೈದ್ಯಕೀಯ ವ್ಯವಸ್ಥೆಯೇ ಇಲ್ಲ. ಮಕ್ಕಳಿಗೆ ಹೊರಗಿನಿಂದ ಔಷಧಿ ತಂದು ಕೊಡಲು ಹೇಳುತ್ತಾರೆ. ಆಸ್ಪತ್ರೆಯಲ್ಲಿಯೇ ಔಷಧಿ ಕೊಡಬೇಕು ಎಂಬ ನಿಯಮವಿದೆ. ಆದರೆ, ಇದನ್ನು ಪಾಲನೆ ಮಾಡುತ್ತಿಲ್ಲ ಎಂದಿದ್ದಾರೆ.
ಹೊರಗೆ ಸರ್ವರ್ ಡೌನ್ ಎಂದು ಬೋರ್ಡ್ ಹಾಕಿದ್ದಾರೆ. ಆದರೆ, ಒಳಗೆ ಸಿಬ್ಬಂದಿ ಕುಳಿತು ಕೆಲಸ ಮಾಡುತ್ತಾರೆ. ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಾರೆ. ನಾವು ಹೇಳಿದ ನಂತರ ಬೋರ್ಡ್ ತೆಗೆದುಹಾಕಿದ್ದಾರೆ ಎಂದರು.
ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವ ಸಲುವಾಗಿ ಸರಕಾರ ನಿತ್ಯ ಲಕ್ಷಾಂತರ ರುಪಾಯಿ ಹಣ ನೀಡುತ್ತದೆ. ವಿಕ್ಟೋರಿಯಾ ಆಸ್ಪತ್ರೆಗೆ ಎರಡು ಲಕ್ಷ ಹಣ ನಿತ್ಯ ಬಿಡುಗಡೆಯಾಗುತ್ತದೆ. ಕೆ.ಸಿ. ಜನರಲ್ ಆಸ್ಪತ್ರೆಗೆ ನಿತ್ಯ ಒಂದು ಲಕ್ಷ ರು. ಹಣ ಬಿಡುಗಡೆಯಾಗಬಹುದು. ಆದರೆ, ಅದರ ಬಳಕೆ ಸರಿಯಾಗಿ ಆಗುತ್ತಿಲ್ಲ ಎಂದರು.