ಬೆಂಗಳೂರು: ಗ್ಯಾರಂಟಿಗಳ ಪರಿಷ್ಕರಣೆ ಸಂಬಂಧ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಮೇಲಿನ ಹೊರೆ, ಪರಿಷ್ಕರಣೆ ಮಾಡಿದರೆ ಆಗುವ ಲಾಭ, ನಷ್ಟದ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಪರಿಷ್ಕರಣೆ ಮಾಡುವುದೇ ಆದರೆ, ಯಾವ ಯೋಜನೆಗೆ ಯಾವ ಮಾನದಂಡಗಳ ಅಳವಡಿಕೆ ಮಾಡಬಹುದು ಎಂಬ ಬಗ್ಗೆ ಕೂಡ ಚರ್ಚೆ ನಡೆಯಿತು ಎನ್ನಲಾಗಿದೆ.
ಶಕ್ತಿ ಯೋಜನೆ ವಿಚಾರದಲ್ಲಿ ಯಾರ ಮೇಲೂ ನಿಯಂತ್ರಣ ಸಾಧ್ಯವಾಗುವುದಿಲ್ಲ. ಆದರೆ, ಬಹುಮುಖ್ಯವಾಗಿ ಗೃಜಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮೇಲೆ ಕೆಲ ನಿಬಂಧನೆಗಳನ್ನು ಹಾಕಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.
ಗೃಹಲಕ್ಷ್ಮಿ ಯೋಜನೆಗೆ ಆದಾಯದ ಮಿತಿ ನಿಗದಿ ಗೊಳಿಸುವುದು, ಆದಾಯ ತೆರಿಗೆ, ಜಿಎಸ್ ಟಿ ಪಾವತಿ ಮಾಡುವವರನ್ನು ಯೋಜನೆಯಿಂದ ಹೊರಗಿಡುವುದು, ಆದಾಯ ತೆರಿಗೆ ಪಾವತಿದಾರರಿಗೆ ಉಚಿತ ವಿದ್ಯುತ್ ವಿನಾಯಿತಿ ಕಡಿತಗೊಳಿಸುವುದು ಸೇರಿ ಅನೇಕ ಸಲಹೆಗಳು ಬಂದಿವೆ ಎಂಬ ಮಾಹಿತಿಯಿದೆ.
ಕಳೆದೊಂದು ವಾರದಿಂದ ಗ್ಯಾರಂಟಿ ಸ್ಕೀಂ ನಲ್ಲಿ ಕೆಲ ಮಾರ್ಪಾಡು ಮಾಡುವಂತೆ ಸಲಹೆ ಕೇಳಿಬಂದಿದ್ದವು. ಕೆಲವು ಸಚಿವರು, ಇಂತಹ ಪರಿಷ್ಕರಣೆ ಸಾಧ್ಯತೆ ಬಗ್ಗೆ ಮಾತನ್ನಾಡಿದ್ದರು. ಹೀಗಾಗಿ, ಇಂದು ನಡೆದ ಆರ್ಥಿಕ ಇಲಾಖೆಯ ಸಭೆ ಮಹತ್ವ ಪಡೆದುಕೊಂಡಿದೆ.

