ಭೂಪಾಲ್ : ಮೊದಲ ಬಾರಿಗೆ ಮೋಟರ್ ಬೈಕ್ ಖರೀದಿ ಮಾಡಿದ ಟೀ ಸ್ಟಾಲ್ ಮಾಲೀಕನೊಬ್ಬ ತನ್ನಿಡೀ ಏರಿಯಾ ಪೂರ್ತಿ ಡಿಜೆ ಮೆರವಣಿಗೆ ನಡೆಸಿ, ಸಂಭ್ರಮಾಚರಣೆ ಮಾಡಿದ ಘಟನೆ ಮಧ್ಯಪ್ರದೇಶದ ಶಿವಪುರಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ಟೀ ಸ್ಟಾಲ್ ನಡೆಸುತ್ತಿರುವ ಮುರಾರಿ ಲಾಲ್ ಕುಶ್ವಾ ಎಂಬಾತನೇ ಡಿಜೆ ಮೆರವಣಿಗೆ ಮೂಲಕ ಸದ್ದು ಮಾಡಿದಾತ. ಈತ 60 ಸಾವಿರ ಬೆಲೆ ಟಿವಿಎಸ್ ಎಕ್ಸ್ ಎಲ್ ಬೈಕ್ ಖರೀದಿ ಮಾಡಿದ್ದ, ಅದರ ಸಂಭ್ರಮಕ್ಕೆ ಇಡೀ ಏರಿಯಾದಲ್ಲಿ ಡಿಜೆ ಸೌಂಡ್ಸ್ ಹಾಕಿಸಿ, ತನ್ನ ಗೆಳೆಯರು ಮತ್ತು ಕುಟುಂಬಸ್ಥರ ಜತೆಗೆ ಕುಣಿದು ಕಪ್ಪಳಿಸಿದ್ದಾನೆ.
ಡಿಜೆ ಬಾಡಿಗೆ ತರಿಸುವ ಜತೆಗೆ ಜೆಸಿಬಿಯನ್ನು ಬಾಡಿಗೆಗೆ ಪಡೆದು ಬಲೂನ್ ಮತ್ತು ಹೂವುಗಳಿಂದ ಸಿಂಗಾರ ಮಾಡಿದ್ದ ತನ್ನ ಮೋಟಾರು ಬೈಕ್ ಅನ್ನು ಆಗಸದೆತ್ತರಕ್ಕೆ ಎತ್ತಿಸಿ ಖುಷಿಪಟ್ಟಿದ್ದಾನೆ. ಅನುಮತಿ ಇಲ್ಲದೆ ಡಿಜೆ ಬಳಸಿದ ಆರೋಪದಲ್ಲಿ ಪೊಲೀಸರು ಮುರಾರಿ ಮತ್ತು ಡಿಜೆ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ನಡುವೆ ತನ್ನ ಮಗಳು ಹಾಗೂ ಇಬ್ಬರು ಗಂಡು ಮಕ್ಕಳ ಖುಷಿಗಾಗಿ ನಾನು ಸೆಲಬ್ರೇಷನ್ ಮಾಡಿದ್ದೇನೆ ಎಂದಿ ಮುರಾರಿ ಸಮರ್ಥನೆ ಮಾಡಿಕೊಂಡಿದ್ದಾರೆ. ಈತ 60 ಸಾವಿರದ ಮೋಟಾರು ಬೈಕ್ ಅನ್ನು 20 ಸಾವಿರ ಡೌನ್ ಪೇಮೆಂಟ್ ಮಾಡಿ ಕೊಂಡುಕೊಂಡಿದ್ದಾನೆ ಎನ್ನಲಾಗಿದೆ.
ಮುರಾರಿ ಲಾಲ್ ಕಂತಹ ಮೆರವಣಿಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಈತ ಈ ಹಿಂದೆ 12500 ರು. ಕೊಟ್ಟು ಮೊಬೈಲ್ ಖರೀದಿ ಮಾಡಿದಾಗ, 25,000 ಸಾವಿರ ಖರ್ಚು ಮಾಡಿ, ಊರಿನ ಜನರನ್ನು ಸೇರಿಸಿ ಮೆರವಣಿಗೆ ನಡೆಸಿದ್ದ, ನೆಂಟರಿಷ್ಠರಿಗೆಲ್ಲ ಭರ್ಜರಿ ಊಟ ಹಾಕಿಸಿದ್ದ ಎನ್ನಲಾಗಿದೆ.