ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನಡೆದ ಧಾರ್ಮಿಕ ದತ್ತಿ ಪರಿಷತ್ ಸಭೆ
ನವೆಂಬರ್ 25, 26 ಕ್ಕೆ ಬಸವನಗುಡಿ ಕಡಲೇಕಾಯಿ ಪರಿಷೆ
ಬೆಂಗಳೂರು: ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿಯಾಗಿಯಾಗಿದ್ದು, ನ.25 ಮತ್ತು 26 ರಂದು ಪರಿಷೆ ನಡೆಯಲಿದೆ.
ಪ್ರತೀ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ. ಹೀಗಾಗಿ, ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನಡೆದ ಧಾರ್ಮಿಕ ದತ್ತಿ ಪರಿಷತ್ ಸಭೆಯಲ್ಲಿ ಈ ವರ್ಷ ನವೆಂಬರ್ 25 ಮತ್ತು 26 ರಂದು ಕಡಲೆಕಾಯಿ ನಡೆಸಲು ನಿರ್ಧರಿಸಲಾಗಿದೆ.
ಪರಿಷೆಯಲ್ಲಿ ವ್ಯಾಪಾರಿಗಳಿಗೆ ಸುಂಕ ಹಾಗೂ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸುಂಕಕ್ಕೆ ಟೆಂಡರ್ ಹಾಗೂ ವ್ಯಾಪಾರಿಗಳಿಗೆ ಸುಂಕವಿಲ್ಲದೇ ಕಡಲೆಕಾಯಿ ಪರಿಷೆ ನಡೆಯಲಿದೆ. ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಸುಂಕ ವಸೂಲಿ ಮಾಡಲಾಗುತ್ತಿತ್ತು.
ಇದಕ್ಕಾಗಿ ಟೆಂಡರ್ ಕರೆದು ಅನುಮತಿ ನೀಡಲಾಗುತ್ತಿತ್ತು. ಟೆಂಡರ್ ಪಡೆದವರು ವ್ಯಾಪಾರಿಗಳಿಂದ ಬಲವಂತವಾಗಿ ಹೆಚ್ಚು ಸುಂಕ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದವು.
ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಲಾಗಿದೆ. ಪ್ಲಾಸ್ಟಿಕ್ ಚೀಲದ ಬದಲಿಗೆ ‘ಕೈಚೀಲ ತನ್ನಿ’ ಎಂಬ ಘೋಷಣೆ ಮೂಲಕ ವ್ಯಾಪಾರಿಗಳು ಹಾಗೂ ನಾಗರಿಕರಲ್ಲಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ಚೀಲ ಬದಲಿಗೆ ಬಟ್ಟೆ ಬ್ಯಾಗ್ ಬಳಸುವಂತೆ ಸೂಚಿಸಲಾಗಿದೆ.